ರಸ್ತೆಗೆ ಇಳಿಯದ ಶೇ.75ರಷ್ಟು ಬಸ್‌ಗಳು; ಜನಸಂಚಾರ ವಿರಳ

Update: 2020-09-28 12:41 GMT

ಉಡುಪಿ, ಸೆ.28: ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಉಡುಪಿ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉಳಿದಂತೆ ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಬೈಂದೂರು, ಕಾಪುಗಳಲ್ಲಿ ಬಂದ್‌ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ.

ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಮಂಗಳೂರು, ಹೆಬ್ರಿ, ಕಾರ್ಕಳ, ಕುಂದಾಪುರ ಮಾರ್ಗಗಳಲ್ಲಿ ಓಡುವ ಎಪಿಎಂ, ಭಾರತಿ, ದುರ್ಗಾಂಬ, ಎಕೆ ಎಂಎಸ್ ಸೇರಿದಂತೆ ಶೇ.75ರಷ್ಟು ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಅದೇ ರೀತಿ ಸಿಟಿಬಸ್‌ಗಳ ಪೈಕಿ ಕೆಲವು ಬಸ್‌ಗಳು ಇಂದು ಓಡಾಟ ನಡೆಸಿಲ್ಲ. ನಗರದಲ್ಲಿ ಜನ ಸಂಚಾರ ತುಂಬಾ ವಿರಳವಾಗಿದ್ದರಿಂದ ಬಸ್‌ಗಳಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಮಾತ್ರ ಪ್ರಯಾಣಿ ಸುತ್ತಿರುವುದು ಕಂಡು ಬಂತು. ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಿದ್ದು, ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅನ್ನದಾತ ಅಟೋ ಯೂನಿಯನ್ ಬಂದ್‌ಗೆ ಬೆಂಬಲ ಸೂಚಿಸಿರುವುದ ರಿಂದ ಈ ಸಂಘಟನೆಗಳ ರಿಕ್ಷಾಗಳು ಬಂದ್‌ನಲ್ಲಿ ಭಾಗಿಯಾಗಿದ್ದು, ಉಳಿದವು ಎಂದಿನಂತೆ ಸಂಚರಿಸಿದವು. ನಗರದ ಸಿಟಿಬಸ್ ನಿಲ್ದಾಣ ಸಮೀಪದ ರಸ್ತೆ ಹಾಗೂ ಉಡುಪಿ ಜಾಮಿಯ ಮಸೀದಿಯ ರಸ್ತೆಗಳ ಇಕ್ಕೇಲ ಗಳಲ್ಲಿರುವ ಅಂಗಡಿಮುಂಗಟ್ಟು, ಹೊಟೇಲುಗಳು ಬಂದ್ ಆಗಿ ಬಂದ್‌ನ ವಾತಾವರಣ ಕಂಡುಬಂದವು. ಆದರೆ ಉಳಿದಂತೆ ನಗರದ ಇತರ ರಸ್ತೆಗಳಲ್ಲಿ ಅಂಗಡಿ, ಹೊಟೇಲು, ಕಚೇರಿಗಳು ಎಂದಿನಂತೆ ತೆರೆದು ವ್ಯವಹಾರ ನಡೆಸುತ್ತಿರುವುದು ಕಂಡುಬಂತು. ಬಂದ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಓಡಾಟ ಕಡಿಮೆಯಾಗಿತ್ತು.

ಕರ್ನಾಟಕ ಬಂದ್‌ಗೆ ಜಿಲ್ಲೆಯ 20ಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿದ್ದು, ಕುಂದಾಪುರ ಹಾಗೂ ಬೈಂದೂರಿನಲ್ಲಿ ಎಡಪಕ್ಷಗಳು ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವ ಬಗ್ಗೆ ವರದಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎರಡು ಕೆಎಸ್‌ಆರ್‌ಪಿ, ಆರು ಜಿಲ್ಲಾ ಸಶಸ್ತ್ರ ಪಡೆ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಬಿಜೆಪಿ ಸರಕಾರದ ವಿರುದ್ಧ ವಿವಿಧ ರೀತಿಯ ಪ್ರತಿಭಟನೆಯನ್ನು ದಾಖಲಿಸಿದ ಉಡುಪಿ ಜಿಲ್ಲೆಯ ಜನತೆಯನ್ನು 14 ಸಂಘಟನೆಗಳು ಅಭಿನಂದಿ ಸಿವೆ. ಅನೇಕ ಬಸ್‌ಗಳ ಮಾಲಕರು ಮತ್ತು ನೌಕರರು, ಅಂಗಡಿ ಮುಂಗಟ್ಟುಗಳ ಮಾಲಕರು, ಆಟೋ ಚಾಲಕರು ಹಾಗೂ ಹಲವು ಸಂಘಗಳು ಸ್ವಯಂ ಪ್ರೇರಿತ ಬಂದ್‌ನ್ನು ಜಿಲ್ಲೆಯಲ್ಲಿ ಬೆಂಬಲಿಸಿವೆ. ಬಸ್ ಮಾಲಕರು ಹಾಗೂ ನೌಕರರಿಗೆ ಶಾಂತಿಯುತ ವಾಗಿ ಮನವಿ ಮಾಡುತ್ತಿದ್ದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದ ಬಿಜೆಪಿ ಆಡಳಿತದ ಪೊಲೀಸರ ಕ್ರಮ ಖಂಡನೀಯ. ಸರಕಾರಗಳ ಕೆಟ್ಟ ನೀತಿಗಳ ವಿರುದ್ಧ ಇನ್ನು ಮುಂದೆಯೂ ಐಕ್ಯ ಹೋರಾಟ ನೆಸಲು 14 ಸಂಘಟನೆಗಳು ನಿರ್ಧರಿಸಿವೆ.

-ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ, ಸಿಪಿಎಂ ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News