ಉಡುಪಿ ಸಿಟಿಬಸ್ ನಿಲ್ದಾಣದಲ್ಲಿ ರಸ್ತೆ ತಡೆ: ಪ್ರತಿಭಟನಕಾರರ ಬಂಧನ

Update: 2020-09-28 12:43 GMT

ಉಡುಪಿ, ಸೆ.28: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತ ಗೊಳಿಸುವಂತೆ ಒತ್ತಾಯಿಸಿ ಉಡುಪಿ ಸಿಟಿಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಧರಣಿ ಕುಳಿತು ರಸ್ತೆ ತಡೆ ನಡೆಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಬಂದ್ ಬೆಂಬಲಿಸಿರುವ ಸಂಘಟನೆಯವರು ಬೆಳಗ್ಗೆ ನಗರದ ಸಿಟಿಬಸ್ ನಿಲ್ದಾಣದಲ್ಲಿ ಸೇರಿ, ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಮಾಲಕರು, ಚಾಲಕರು ಹಾಗೂ ನಿರ್ವಾಹಕರಲ್ಲಿ ಮನವಿ ಮಾಡಿದರು. ಈ ವೇಳೆ ಇವರು ಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಕಾಲ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಈ ಮಧ್ಯೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಗೌಡ ಪ್ರತಿಭಟನ ಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಸಿಟಿಬಸ್ ಮಾಲಕರ ಧೋರಣೆ ಯನ್ನು ವಿರೋಧಿಸಿ, ಸಂಘಟನೆಯವರು ನಿಲ್ದಾಣಕ್ಕೆ ಬಸ್‌ಗಳು ಆಗಮಿಸುವ ಪ್ರವೇಶದಲ್ಲಿ ಧರಣಿ ಕುಳಿತು ತಡೆಯೊಡ್ಡಿದರು.

ಸರಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿದರು. ಬಳಿಕ ಪೊಲೀಸರು ರಸ್ತೆ ತಡೆ ನಡೆಸಿದ 21 ಮಂದಿ ಪ್ರತಿ ಭಟನಾಕರರನ್ನು ಬಂಧಿಸಿ, ಸಂಜೆ ವೇಳೆ ಬಿಡುಗಡೆಗೊಳಿಸಿದರು. ನಂತರ ಬಸ್ ಸಂಚಾರ ಮುಂದುವರೆದಿತ್ತು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್ ಹಾಜರಿದ್ದರು.

 ಬಂಧಿತರಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯ ರಮೇಶ್ ಕಾಂಚನ್, ದಸಂಸ ಮುಖಂಡ ಸುಂದರ್ ಮಾಸ್ಟರ್, ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಆರ್.ಕೆ. ರಮೇಶ್, ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಉದ್ಯಾವರ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ಅನ್ನದಾತ ಆಟೋ ಯೂನಿಯನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ವಿವಿಧ ಸಂಘಟನೆ ಗಳ ಮುಖಂಡರಾದ ಸಾಯಿರಾಜ್ ಕೋಟ್ಯಾನ್, ಧನುಷ್ ಶೆಟ್ಟಿ, ಅಬ್ದುಲ್ ರೆಹಮಾನ್, ಹಮೀದ್ ಸೇರಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News