ರೈತರನ್ನು ಜೀತದಾಳುಗಳನ್ನಾಗಿಸುವ ಹುನ್ನಾರ: ರೈತ ಮುಖಂಡ ವಿಕಾಸ್ ಹೆಗ್ಡೆ

Update: 2020-09-28 12:44 GMT

ಕುಂದಾಪುರ, ಸೆ.28: ಜಮೀನ್ದಾರರ ಹೊಲದಲ್ಲಿ ದುಡಿಯುತ್ತಿದ್ದ ಕೂಲಿ ಕಾರ್ಮಿಕರಿಗೆ ಇಂದಿರಾಗಾಂಧಿ ಹಾಗೂ ದೇವರಾಜ ಅರಸು ಆಸ್ತಿಯ ಹಕ್ಕನ್ನು ನೀಡಿ ಭೂಮಾಲಕರನ್ನಾಗಿ ಮಾಡಿದರೆ, ಇಂದು ಅದೇ ಭೂಮಿಯನ್ನು ರೈತರಿಂದ ಕಿತ್ತು ಬಂಡವಾಳಶಾಹಿಗಳಿಗೆ ನೀಡುವ ಮೂಲಕ ರೈತರನ್ನು ಜೀತ ದಾಳುಗಳನ್ನಾಗಿಸುವ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಜಾರಿಗೆ ತರಲು ಹುನ್ನಾರ ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಮುಖಂಡ ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.

ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಪ್ರಯುಕ್ತ ಕಾಂಗ್ರೆಸ್, ಸಿಪಿಐಎಂ, ದಲಿತ ಸಂಘರ್ಷ ಸಮಿತಿ, ಜೆಡಿಎಸ್, ಡಿವೈಎಫ್‌ಐ ಕುಂದಾಪುರ ಸಮಿತಿಯ ನೇತೃತ್ವದಲ್ಲಿ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಸೋಮವಾರ ಹಮ್ಮಿ ಕೊಳ್ಳಲಾದ ಪ್ರತಿಭಟನಾ ಸಭೆಯನ್ನು್ದೇಶಿಸಿ ಅವರು ಮಾತನಾಡುತಿದ್ದರು.

ರೈತರ ಸಂಪತ್ತನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಉದ್ದೇಶ ದಿಂದ ಈ ಕಾಯ್ದೆಯನ್ನು ಜಾರಿಗೆ ತರುತ್ತಿದ್ದಾರೆಯೇ ಹೊರತು ರೈತ ಪರವಾಗಿ ಅಲ್ಲ. ಈ ಕಾಯ್ದೆಯ ಹಿಂದೆ ಸರಕಾರದ ಹಿಡನ್ ಅಜೆಂಡಾ ಅಡಗಿದೆ. ಈ ಕಾಯಿದೆ ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ಎಲ್ಲರೂ ತುತ್ತು ಊಟಕ್ಕಾಗಿ ಪರಿತಪಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಇಂದು ದೇಶದಲ್ಲಿ ಸರಕಾರ ಎಂಬುದೇ ಇಲ್ಲವಾಗಿದೆ. ಈಗ ನಮ್ಮ ಆಡಳಿತ ನಡೆಸುವವರು ಏಜೆನ್ಸಿಗಳು. ಇವರು ಒಂದು ಸರಕಾರವಾಗಿ ಕೆಲಸ ಮಾಡುತ್ತಿಲ್ಲ. ಸರಕಾರದ ಎಲ್ಲ ಉದ್ದಿಮೆಗಳನ್ನು ಮಾರಾಟ ಮಾಡಿ ಲಾಭ ಗಳಿಸುವುದೇ ಇವರ ಉದ್ದೇಶವಾಗಿದೆ. ಈಗಾಗಲೇ ಇವರು ಅಂಬಾನಿ, ಅದಾನಿಯಂತಹ ಕಾರ್ಪೋರೇಟ್ ದಣಿಗಳಿಗೆ ಮಂಡಿಯೂರಿಯಾಗಿದೆ ಎಂದು ಅವರು ದೂರಿದರು.

ಸಿಪಿಐಎಂ ಮುಖಂಡ ಕೆ.ಶಂಕರ್ ಮಾತನಾಡಿ, ಈ ದೇಶದ ಕಾರ್ಮಿಕರ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಕೇಂದ್ರ-ರಾಜ್ಯ ಸರಕಾರಗಳು ಇದೀಗ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ರೈತರನ್ನು ಮುಗಿಸಲು ಮುಂದಾಗಿವೆ. ಜನರ, ರೈತರ, ಕಾರ್ಮಿಕರ ಹಕ್ಕು ಭಾದ್ಯತೆ, ರಾಜಕೀಯ ಸ್ವಾತಂತ್ರ್ಯ ಹಾಗೂ ಪ್ರತಿಭಟನೆಯಂತಹ ಪ್ರಮುಖ ಸಂವಿಧಾನ ಬದ್ದವಾದ ಹಕ್ಕನ್ನು ಕಸಿಯಲು ಬಿಜೆಪಿ ಸರಕಾರ ಹೊರಟಿದೆ ಎಂದು ಟೀಕಿಸಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ದಸಂಸ ಭೀಮವಾದದ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಸಿಐಟಿಯು ಮುಖಂಡ ಎಚ್.ನರಸಿಂಹ, ಮಹಿಳಾ ಕಾಂಗ್ರೆಸ್ ಮುಖಂಡೆ ಶ್ಯಾಮಲಾ ಭಂಡಾರಿ, ಡಿವೈಎಫ್ಐನ ರಾಜೇಶ್ ವಡೇರಹೋಬಳಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಡಿ, ವಿನೋದ್ ಕ್ರಾಸ್ತಾ, ಗಣೇಶ್ ಶೇರುಗಾರ್, ಪುರಸಭಾ ಸದಸ್ಯ ಕೆ.ಜಿ.ನಿತ್ಯಾನಂದ, ಕೇಶವ್ ಭಟ್, ಸಿಐಟಿಯುನ ಮಹಾಬಲ ವಡೇರಹೋಬಳಿ, ಬಲ್ಕೀಸ್ ಬಾನು, ರಾಜು ದೇವಾಡಿಗ, ರವಿ ವಿ.ಎಂ., ಸಂತೋಷ್ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News