ಭೂಸುಧರಣಾ ತಿದ್ದುಪಡಿ ಕಾಯ್ದೆ ಕರಾಳ ಶಾಸನ: ಗೋಪಾಲ ಪೂಜಾರಿ

Update: 2020-09-28 12:45 GMT

ಬೈಂದೂರು, ಸೆ.28: ರೈತ ವಿರೋಧಿ ಭೂಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ ತಿದ್ದುಪಡಿ, ಅಗತ್ಯವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಪ್ರಯುಕ್ತ ಬೈಂದೂರು ಕಾಂಗ್ರೆಸ್, ದಲಿತ ಸಂಘರ್ಷ ಸಮಿತಿ, ಜೆಡಿಎಸ್, ಸಿಪಿಐಎಂ, ತಾಲೂಕು ಮುಸ್ಲಿಮ್ ಒಕ್ಕೂಟಗಳ ನೇತೃತ್ವದಲ್ಲಿ ಸೋಮವಾರ ಬೈಂದೂರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಬಳಿ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಬಂಡವಾಳಶಾಹಿಗಳು ರೈತರ ಜಮೀನನ್ನು ಕಬಳಿಸಿ ಕೃಷಿ ಮಾರು ಕಟ್ಟೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಈ ಭೂಸುಧಾರಣಾ ತಿದ್ದುಪಡಿ ಕಾಯ್ದೆಯು ಕರಾಳ ಶಾಸನವಾಗಿದೆ. ಇದನ್ನು ವಾಪಾಸ್ಸು ಪಡೆದು ಕೊಳ್ಳಬೇಕು. ಸರಕಾರ ಎಪಿಎಂಸಿ ಕಾಯಿದೆಯಲ್ಲಿ ತಿದ್ದುಪಡಿ ತಂದು ರೈತರ ಹಕ್ಕಿಗೆ ಚ್ಯುತಿ ತರಲಿದೆ. ಇಂತಹ ಕರಾಳ ಶಾಸನಗಳ ಮೂಲಕ ಬಿಜೆಪಿ ಸರಕಾರ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ರೈತರಲ್ಲಿ ಚರ್ಚೆ ಮಾಡಲು ಸರಕಾರಕ್ಕೆ ಸಮಯಾವಕಾಶವಿಲ್ಲ. ಮೋದಿ ಸರಕಾರದ ಕೃಷಿ ನೀತಿಯಿಂದ ಭಾರತದ ಕೃಷಿಯನ್ನು ಕಂಪೆನಿಗಳು ಸಂಪೂರ್ಣವಾಗಿ ಸ್ವಾದೀನಪಡಿ ಸಿಕೊಳ್ಳಲಿವೆ. ನಂತರ ಏಕಸ್ವಾಮ್ಯ ಮೆರೆದು ಆಹಾರದ ಬೆಲೆಯನ್ನು ಆ ಕಂಪೆನಿಗಳೇ ನಿರ್ಧರಿಸಲಿವೆ. ಆಗ ಹಣವಿದ್ದರೆ ಮಾತ್ರ ಆಹಾರ ತಿನ್ನಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. ಸರಕಾರ ಆಹಾರದ ಬೆಲೆ ನಿರ್ಧರಿಸುವ ಹಕ್ಕನ್ನು ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ, ಗಣೇಶ ತೊಂಡೆಮಕ್ಕಿ, ಮಾಧವ ದೇವಾಡಿಗ, ಶ್ರೀಧರ ಉಪ್ಪುಂದ, ಚಂದ್ರ ದೇವಾಡಿಗ, ಅಮ್ಮಯ್ಯ ಪೂಜಾರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಕಾರ್ಯದರ್ಶಿ ನಾಗರಾಜ ಗಾಣಿಗ, ಜಿಪಂ ಸದಸ್ಯೆ ಗೌರಿ ದೇವಾಡಿಗ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಸನ್ ಮಾವುಡ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಸಂದೇಶ ಭಟ್, ನಿತಿನ್ ಶೆಟ್ಟಿ, ದಸಂಸ ಮುಖಂಡ ನರಸಿಂಹ ಹಳಗೇರಿ, ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮಣ ಯಡ್ತರೆ, ದಯಾನಂದ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ರಸ್ತೆ ತಡೆ ನಡೆಸಿದ ಪ್ರತಿಭಟನ ಕಾರರನ್ನು ಪೊಲೀಸರು ಬಂಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News