ಶ್ರೀನಿವಾಸ್ ವಿವಿಯಲ್ಲಿ ಇಂಜಿನಿಯರ್ಸ್ ದಿನಾಚರಣೆ

Update: 2020-09-28 14:47 GMT

ಮಂಗಳೂರು, ಸೆ.28: ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಭಾಂಗಣದಲ್ಲಿ ಇಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಯನ್ ಡಿಸ್ಟ್ರಿಕ್ಟ್ ಗವರ್ನರ್ 317ಸಿ. ನೀಲಕಂಠ ಎಂ. ಹೆಗಡೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಮಾಜ ಮತ್ತು ದೇಶವನ್ನು ಕಟ್ಟುವಲ್ಲಿ ಇಂಜಿನಿಯರ್ ವೃತ್ತಿಪರರ ಕೊಡುಗೆ ಅಪಾರ. ಸೃಜನಶೀಲತೆ, ಆವಿಷ್ಕಾರ ಹಾಗೂ ವಿಜ್ಞಾನದ ಸರಿಯಾದ ಅಳವಡಿಕೆಯಿಂದ ಯಾವುದೇ ಸಮಸ್ಯೆಗಳಿಗೆ ತಾಂತ್ರಿಕ ವೃತ್ತಿಪರರು ಪರಿಹಾ ಕೊಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಸರ್ ಎಂ.ವಿಶ್ವೇಶ್ವರಯ್ಯ ಅತ್ಯಂತ ದೂರದರ್ಶಿತ್ವವುಳ್ಳವರಾಗಿದ್ದರು. 20ನೇ ಶತಮಾನದ ಅತ್ಯಂತ ಯಶಸ್ವಿ ಸಿವಿಲ್ ಇಂಜಿನಿಯರ್ ವಿಶ್ವೇಶ್ವರಯ್ಯ ವಿನ್ಯಾಸಗೊಳಿಸಿ ನಿರ್ಮಿಸಿರುವ ಹಲವು ಅಣೆಕಟ್ಟುಗಳು, ಪ್ರವಾಹ ರಕ್ಷಣಾ ರಚನೆಗಳು ಹಾಗೂ ನೀರಾವರಿ ಯೋಜನೆಗಳು ಇಂದಿಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಕೌಶಲ್ಯ ಭಾರತ (ಸ್ಕಿಲ್ ಇಂಡಿಯಾ) ಮಹತ್ವವನ್ನು ಅರಿತಿದ್ದ ವಿಶ್ವೇಶ್ವರಯ್ಯ ಸುಮಾರು ನೂರು ವರ್ಷಗಳ ಹಿಂದೆಯೇ ತಾವು ವಿನ್ಯಾಸಗೊಳಿಸಿ ನಿರ್ಮಿಸಿರುವ ರಚನೆಗಳಲ್ಲಿ ಅದನ್ನು ಅಳವಡಿಸಿದ್ದರು. ದೇಶದ ಸರ್ವತೋಮುಖ ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಯು ಉತ್ತಮ ಗುಣಮಟ್ಟದ ಉನ್ನತ ವಿದ್ಯಾಭಾಸದಿಂದ ಮಾತ್ರ ಸಾಧ್ಯ ಎಂದರು.

ಅಮೆರಿಕ ದೇಶದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ‘ಕ್ಯಾಂಪಸ್ ಪ್ಲೇಸ್ಮೆಂಟ್’ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿಲ್ಲ; ಬದಲಾಗಿ ಪೇಟೆಂಟ್‌ಗಳನ್ನು ಪಡೆಯುವಲ್ಲಿ ವಿಶೇಷ ಗಮನ ನೀಡುತ್ತಿದ್ದಾರೆ. ಪ್ರಸ್ತುತ, ಕೋವಿಡ್-19 ಕಾರಣದಿಂದಾಗಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂಜರಿತವಾಗಿದೆ. ಆದರೆ, ನಮ್ಮ ಆಲೋಚನಾ ಶಕ್ತಿಯು ಯಾವುದೇ ಹಿಂಜರಿಕೆ ಕಂಡಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಸಂಚಾಲಕ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಸಮಾಜಕ್ಕೆ ಹಾಗೂ ದೇಶಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಥಾಮಸ್ ಪಿಂಟೋ ಮಾತನಾಡಿ, ಸತ್ಕಾರ, ಸಂಸಾರ, ಸಂಸ್ಕಾರ; ಈ ಮೂರೂ ತತ್ವಗಳು ನಮ್ಮ ಜೀವನದಲ್ಲಿ ಅತಿ ಮುಖ್ಯ. ಸರ್ ಎಂ. ವಿಶ್ವೇಶ್ವರಯ್ಯ ಅವರ ತತ್ವ-ಸಿದ್ಧಾಂತಗಳು ಎಂದೆಂದಿಗೂ ಇಂಜಿನಿಯರಿಂಗ್ ವೃತ್ತಿಪರರಿಗೆ ಆದರ್ಶಪ್ರಾಯ ಎಂದು ಹೇಳಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೊ. ರಾಜೇಶ್ವರಿ ಪ್ರಾರ್ಥಿಸಿದರು. ಪ್ರೊ. ಪ್ರಸನ್ನ ಪಿ. ರಾವ್ ಸ್ವಾಗತಿಸಿದರು. ಪ್ರೊ.ಕೆ. ಶ್ರೀನಾಥ್ ರಾವ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಭವಾನಿ ಶಂಕರ್ ವಂದಿಸಿದರು. ಪ್ರೊ.ಎಸ್. ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕ ಡಾ.(ಲೆಫ್ಟಿನೆಂಟ್ ಕಮಾಂಡರ್) ಪಿ. ಕೆ. ಸುರೇಶ್ ಕುಮಾರ್, ಶ್ರೀನಿವಾಸ್ ವಿಶ್ವ ವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಪ್ರವೀಣ್ ಬಿ.ಎಂ., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀಪ್ರಕಾಶ್ ಬಿ., ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಕಾಲೇಜಿನ ಎಲ್ಲ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವರ್ಚುವಲ್ ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News