ಫಲಾನುಭವಿಗಳ ಅರ್ಜಿ ಶೀಘ್ರ ಇತ್ಯರ್ಥಪಡಿಸಿ : ಸಿಇಒ ಸೆಲ್ವಮಣಿ

Update: 2020-09-28 14:49 GMT

ಮಂಗಳೂರು, ಸೆ.28: ಸರಕಾರದ ನಾನಾ ಯೋಜನೆಗಳಲ್ಲಿ ಫಲಾನುಭವಿಗಳು ಸಲ್ಲಿಸುವ ಅರ್ಜಿಗಳನ್ನು ಬ್ಯಾಂಕ್‌ಗಳು ಬಾಕಿ ಇರಿಸಿಕೊಳ್ಳದೆ ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ದ.ಕ. ಜಿಪಂ ಸಿಇಒ ಡಾ.ಆರ್. ಸೆಲ್ವಮಣಿ ಸೂಚಿಸಿದ್ದಾರೆ.

ದ.ಕ. ಜಿಲ್ಲಾ ಕೆನರಾ ಬ್ಯಾಂಕ್ ಆಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರಿ ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕ್‌ಗಳು ಹೆಚ್ಚಿನ ಒತ್ತು ನೀಡಬೇಕು ಎಂದರು.

ಕೆಲವೊಂದು ಬ್ಯಾಂಕ್‌ನಲ್ಲಿ ಫಲಾನುಭವಿಗಳ ಅರ್ಜಿಯನ್ನು ಇತ್ಯರ್ಥ ಪಡಿಸಿದೆ, ಬಾಕಿ ಇರಿಸಿಕೊಂಡಿರುವುದು ಪರಿಶೀಲನೆ ಸಮಯದಲ್ಲಿ ಕಂಡು ಬಂದಿದೆ. ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗುವ ಅರ್ಹ ಅರ್ಜಿಗಳಿಗೆ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು. ಮಂಜೂರು ಮಾಡಲು ಸಾಧ್ಯ ವಾಗದ ಅರ್ಜಿಗಳನ್ನು ಬ್ಯಾಂಕಿನಲ್ಲಿ ಬಾಕಿ ಇರಿಸಿಕೊಳ್ಳದೆ ಅರ್ಜಿದಾರರಿಗೆ ಕಾರಣ ಸಹಿತ ಮಾಹಿತಿ ನೀಡಬೇಕು. ಅರ್ಜಿಗಳನ್ನು ಅದಷ್ಟು ಬೇಗನೇ ಇತ್ಯರ್ಥ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಕೋವಿಡ್-19 ಸಂದರ್ಭದಲ್ಲೂ ಕೆಲವು ಬ್ಯಾಂಕ್ ನಿಗದಿತ ಗುರಿ ಹೊಂದುವಲ್ಲಿ ಯಶಸ್ವಿ ಆಗಿವೆ. ಕೆಲವು ಬ್ಯಾಂಕ್ ವಿಫಲತೆ ಹೊಂದಿವೆ. ಮುಂದಿನ ದಿನಗಳಲ್ಲಿ ಹೊಸ ಗುರಿ ತಲುಪಬೇಕು. ಎಜುಕೇಷನ್ ಲೋನ್ ಮತ್ತು ಹೌಸ್ಸಿಂಗ್ ಲೋನ್ ಹಲವು ಬ್ಯಾಂಕ್‌ಗಳಲ್ಲಿ ಉತ್ತಮ ಗುರಿ ತಲುಪುವಲ್ಲಿ ಸಾಧನೆ ತೋರಿದರೆ; ಇನ್ನು ಕೆಲವು ಬ್ಯಾಂಕ್‌ಗಳು ವಿಫಲಗೊಂಡಿವೆ. ಕೃಷಿ ಕ್ಷೇತ್ರ, ಗೃಹಸಾಲ, ಶೈಕ್ಷಣಿಕ ಸಾಲದಲ್ಲಿ ಜಿಲ್ಲೆಯು ಉತ್ತಮ ಸಾಧನೆ ತೋರುವಲ್ಲಿ ಬ್ಯಾಂಕ್‌ಗಳು ಶ್ರಮಿಸಬೇಕು ಎಂದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಪ್ರಿಲ್ ತಿಂಗಳಿನಿಂದ ಸೆ.15ರವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 110 ಮೀನುಗಾರರಿಗೆ ಸಾಲವನ್ನು ನೀಡಲಾಗಿದೆ. ಜಿಲ್ಲೆಯ ಯಾವುದೇ ಬ್ಯಾಂಕ್‌ಗಳು ಸಾರ್ವಜನಿಕರು ಜನ್‌ಧನ್ ಖಾತೆ ತೆರೆಯಲು ಬಯಸಿದಲ್ಲಿ ನಿರಾಕರಿಸಬಾರದು ಎಂದು ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೆನರಾ ಬ್ಯಾಂಕ್‌ನ ಎಲ್.ಡಿ.ಸಿ.ಎಂ. ಪ್ರವೀಣ್, 2020-21ನೇ ಸಾಲಿನಲ್ಲಿ ಕೃಷಿ ವಲಯದಲ್ಲಿ ಶೇ.70.40 ಸಾಧನೆಯ ಗುರಿ ತಲುಪಿದೆ. ಎಂಎಸ್‌ಎಂಇ ಕ್ಷೇತ್ರದಲ್ಲಿ ಶೇ.78.27 ಗುರಿ ಸಾಧಿಸಿದೆ. ಮುದ್ರಾ ಯೋಜನೆಯಡಿ ಜಿಲ್ಲೆಯ ಬ್ಯಾಂಕ್‌ಗಳು ಒಟ್ಟು 3,380 ಖಾತೆಗಳಿಗೆ ಸಾಲ ವಿತರಣೆ ಮಾಡಿವೆ ಎಂದು ವಿವರಿಸಿದರು.

ಸಭೆಯಲ್ಲಿ ನರ್ಬಾಡ್ ಡಿಡಿಎಂ ಸಂಗೀತಾ ಕರ್ತ, ಕೆನರಾ ಬ್ಯಾಂಕ್ ಡಿಜಿಎಂ ಸುಚಿತ್ರಾ ಹಾಗೂ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು, ಸಿಬ್ಬಂದಿ ಮತ್ತಿತರು ಉಪಸ್ಥಿತರಿದ್ದರು.

‘ಬ್ಯಾಂಕ್‌ಗಳು ಕನ್ನಡದಲ್ಲೇ ವ್ಯವಹರಿಸಲಿ’

ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಸರಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲವೆಂದು ಕೆಲವರು ದೂರು ನೀಡುವ ಜೊತೆ ಕನ್ನಡ ಭಾಷೆಯಲ್ಲಿ ವ್ಯವಹಾರ ನೀಡುವಂತೆ ಮನವಿಯನ್ನು ಮಾಡಿದ್ದು, ಅಧಿಕಾರಿಗಳು ಅದಷ್ಟು ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಬೇಕು ಎಂದು ಜಿಪಂ ಸಿಇಒ ಡಾ.ಆರ್. ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News