ಸಂಜೆ ಆಕಾಶದಲ್ಲಿ ಹವಳದಂತೆ ಹೊಳೆಯುತ್ತಿದೆ ಮಂಗಳ ಗ್ರಹ

Update: 2020-09-28 14:53 GMT

ಉಡುಪಿ, ಸೆ.28: ಈ ತಿಂಗಳು ಪೂರ್ತಿ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ ಹವಳದಂತೆ ಕೆಂಬಣ್ಣದಲ್ಲಿ ಹೊಳೆಯುತ್ತಿರುವ ಮಂಗಳ ಗ್ರಹ ಬರಿಗಣ್ಣಿಗೂ ಗೋಚರಿಸುತ್ತದೆ.

ಇದೇ ಅ.13ರಂದು ಮಂಗಳ ಗ್ರಹ, ಭೂಮಿಗೆ ತೀರಾ ಸಮೀಪ ಬರುತ್ತಿದೆ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಮಂಗಳ ಹತ್ತಿರ ಬರುವ ಈ ವಿದ್ಯಮಾನವನ್ನು ‘ಮಾರ್ಸ್ ಒಪೋಸಿಶನ್’ ಎನ್ನುತ್ತಾರೆ. ಹೀಗೆ ಹತ್ತಿರ ಬಂದಾಗ ದೊಡ್ಡದಾಗಿ ಕಂಡು ಇಡೀ ರಾತ್ರಿ ಹವಳದಂತೆ ಹೊಳೆಯುತ್ತದೆ.

ಸುಮಾರು 24 ಕೋಟಿ ಕಿ.ಮೀ. ದೂರದಲ್ಲಿ ದೀರ್ಘ ವೃತ್ತಾಕಾರದಲ್ಲಿ ಸೂರ್ಯನಿಗೆ ಸುತ್ತು ಬರಲು ಈ ಮಂಗಳ ಗ್ರಹಕ್ಕೆ 687 ದಿನಗಳು ಬೇಕು. ಭೂಮಿಯೂ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿ ಸೂರ್ಯನ ಸುತ್ತುವುದರಿಂದ ಈ ಎರಡೂ ಗ್ರಹಗಳು 2 ವರ್ಷ 50 ದಿನಗಳಲ್ಲಿ ಸಮೀಪಿಸಿ ದೂರ ಸರಿಯುತ್ತವೆ.

ಅ. 13ರಂದು ಭೂಮಿಗೆ 6.2 ಕೋಟಿ ಕಿ.ಮೀ. ದೂರದಷ್ಟು ಹತ್ತಿರ ಬಂದು ಸುಂದರವಾಗಿ ದೊಡ್ಡದಾಗಿ ಕಾಣುತ್ತದೆ. 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ 39 ಕೋಟಿ ಕಿ.ಮಿ. ದೂರದಲ್ಲಿರುತ್ತಾ ಅತಿ ಚಿಕ್ಕದಾಗಿ ಗೋಚರಿಸುತ್ತದೆ.

ಈಗ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ, ಶುಕ್ರ ಗ್ರಹದ ಹೊಳಪನ್ನೂ ಮೀರಿಸುವ ಕೆಂಬಣ್ಣದ ಹವಳ, ಮಂಗಳ ಕಾಣುತ್ತಿದೆ. ಈ ತಿಂಗಳು ಪೂರ್ತಿ ಹೀಗೆ ಕಾಣುತ್ತದೆ. ಅ. ಒಂದನೇ ತಾರೀಕು ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ. ಇವುಗಳ ಜೊತೆಗೆ ನೆತ್ತಿಯ ಮೇಲೆ ಗುರು, ಶನಿ ಗ್ರಹಗಳನ್ನೂ ಬರೀ ಕಣ್ಣಿನಿಂದಲೇ ಗುರುತಿಸಬಹುದು ಎಂದು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಕ್ಲಬ್‌ನ ಸ್ಥಾಪಕ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News