ಸಾರ್ವಜನಿಕರ ಪ್ರವೇಶಕ್ಕೆ ತೆರೆದ ಶ್ರೀಕೃಷ್ಣಮಠದ ಬಾಗಿಲು

Update: 2020-09-28 14:55 GMT

 ಉಡುಪಿ, ಸೆ.28: ಆರು ತಿಂಗಳ ಬಳಿಕ ಉಡುಪಿ ಶ್ರೀಕೃಷ್ಣ ಮಠದ ಬಾಗಿಲನ್ನು ಶ್ರೀಕೃಷ್ಣನ ದರ್ಶನಕ್ಕಾಗಿ ಸಾರ್ವಜನಿಕರಿಗೆ ತೆರೆಯಲಾಯಿತು. ನೂರಾರು ಮಂದಿ ಭಕ್ತರು ಹೊಸ ಪ್ರವೇಶಧ್ವಾರದ ಮೂಲಕ ಮಠವನ್ನು ಪ್ರವೇಶಿಸಿ, ಶ್ರೀಕೃಷ್ಣನ ದರ್ಶನ ಪಡೆದುಕೊಂಡರು.

ದೇಶಾದ್ಯಂತ ಕೊರೋನ ಸೋಂಕು ವ್ಯಾಪಿಸಿದ ಬಳಿಕ ಹೇರಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 22ರಂದು ಮಠಕ್ಕೆ ಭಕ್ತರ ಪ್ರವೇಶ ವನ್ನು ನಿರ್ಬಂಧಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗಾಗಲೇ ದೇವಸ್ಥಾನಗಳ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ ದ್ದರೂ, ಸೋಂಕಿನ ಕುರಿತಂತೆ ಎಚ್ಚರಿಕೆ ಹೆಜ್ಜೆ ಇರಿಸಿದ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಸೆ.28ರಿಂದಷ್ಟೇ ಸಾರ್ವಜನಿಕ ರಿಗೆ ಪ್ರವೇಶಾ ವಕಾಶ ನೀಡಲಾಗುವುದು ಎಂದು ಪ್ರಕಟಿಸಿದ್ದರು.

ಇಂದಿನಿಂದ ಸಾರ್ವಜನಿಕರಿಗೆ ಪಾರಂಪರಿಕ ಹಾಗೂ ದೇಸಿಯ ಸ್ಪರ್ಶ ದೊಂದಿಗೆ ಇಡೀ ಮಠದ ದರ್ಶನ ದೊರೆಯುವಂತೆ ರೂಪಿಸಲಾದ ಹೊಸ ಮಾರ್ಗದಲ್ಲಿ ಮಠಕ್ಕೆ ಪ್ರವೇಶ ನೀಡಿದ್ದರೂ, ಈ ಅವಕಾಶ ಸದ್ಯಕ್ಕೆ ಪ್ರತಿದಿನ ಅಪರಾಹ್ನ 2 ರಿಂದ ಸಂಜೆ 5 ರವರೆಗೆ ಮಾತ್ರ ಇರುತ್ತದೆ. ಅಂದರೆ ದಿನದಲ್ಲಿ ಮೂರು ಗಂಟೆ ಮಾತ್ರ ಕೃಷ್ಣ ದರ್ಶನಕ್ಕೆ ಅವಕಾಶ. ಸದ್ಯಕ್ಕೆ ದರ್ಶನಕ್ಕೆ ಮಾತ್ರ ಅವಕಾಶ, ಯಾವುದೇ ಸೇವೆಗಳನ್ನು ಸಲ್ಲಿಸುವಂತಿಲ್ಲ. ಅದೂ ಸಹ ಮಾಸ್ಕ್ ಹಾಗೂ ಸ್ಯಾನಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಿ. ಅಲ್ಲದೇ ಪ್ರತಿದಿನ ಮಠವನ್ನು ಕಡ್ಡಾಯವಾಗಿ ಸ್ಯಾನಟೈಸ್ ಮಾಡುವ ನಿರ್ಧಾರನ್ನೂ ಅವರು ತೆಗೆದುಕೊಂಡಿದ್ದಾರೆ.

ಪರ್ಯಾಯಶ್ರೀ ಉದ್ಘಾಟನೆ:   ದೇವರ ದರ್ಶನಕ್ಕಾಗಿ ರಾಜಾಂಗಣದ ಎದುರಿನಿಂದ ಹೊಸದಾಗಿ ಪ್ರಾರಂಭಿಸಲಾಗದ ಮಠದ ವಿಶೇಷ ಪ್ರವೇಶ ಮಾರ್ಗವನ್ನು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರೊಂದಿಗೆ ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಲೋಕಾರ್ಪಣೆ ಗೊಳಿಸಿ ಅನುಗ್ರಹ ಸಂದೇಶ ನೀಡಿದರು.

ಇದೇ ವೇಳೆ ಪರ್ಯಾಯ ಶ್ರೀಗಳ ಆಶಯದಂತೆ ಭಕ್ತರು ದೇವರ ದೀಪಕ್ಕೆ ಹಾಕುತ್ತಿದ್ದ ಎಣ್ಣೆಯು ಕಲಬೆರಕೆ ಆಗದಿರಲಿ ಎಂಬ ದೃಷ್ಠಿಯಿಂದ ಎಣ್ಣೆಯ ಬದಲು ತಾವೇ ಮನೆಯಿಂದ ಎಳ್ಳು ತಂದು ಒಪ್ಪಿಸಬಹುದು ಅಥವಾ ಮಠದ ಕೌಂಟರಲ್ಲಿ ತೆಗೆದುಕೊಂಡು ದೇವರ ಮುಂಭಾಗದಲ್ಲಿ ಒಪ್ಪಿಸಿದಲ್ಲಿ ಅದನ್ನು ಗಾಣಕ್ಕೆ ಕೊಟ್ಟು ಶುದ್ಧ ಎಣ್ಣೆಯನ್ನೇ ದೇವರ ದೀಪಕ್ಕೆ ಅರ್ಪಿಸುವ ಸಂಕಲ್ಪಕ್ಕೂ ಇದೇ ವೇಳೆ ಚಾಲನೆ ನೀಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News