ಮುಗಿಯದ ಎನ್‌ಎಚ್‌ಎಂ ಮುಷ್ಕರ : ಉಡುಪಿಯಲ್ಲಿ 332 ಕೊರೋನ ಪಾಸಿಟಿವ್

Update: 2020-09-28 15:46 GMT

ಉಡುಪಿ, ಸೆ. 28: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಕೊನೆಗೊಳ್ಳುವ ಯಾವುದೇ ಸೂಚನೆಗಳು ಲಭ್ಯವಾಗಿಲ್ಲ. ಹೀಗಾಗಿ ಏಳನೇ ದಿನವನ್ನು ಪೂರ್ಣಗೊಳಿಸಿರುವ ಅವರ ಮುಷ್ಕರ ನಾಳೆ ಎಂಟನೇ ದಿನಕ್ಕೆ ಕಾಲಿರಿಸಲಿದೆ.

ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಜೀವವಿಮೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇವರು ಕಳೆದ ಸೋಮವಾರದಿಂದ ಮುಷ್ಕರದಲ್ಲಿ ನಿರತರಾಗಿದ್ದಾರೆ. ಆದರೆ ಸರಕಾರ ಇವರ ಬೆದರಿಕೆಗೆ ನಿರ್ಲಕ್ಷದ ಧೋರಣೆಯನ್ನು ತಾಳಿದೆ.

ಆದರೆ ಇದರಿಂದ ಜಿಲ್ಲೆಯಲ್ಲಿ ಕೊರೋನದ ಅಂಕಿಅಂಶಗಳ ಸಂಗ್ರಹ ಕಾರ್ಯಕ್ಕೆ ಧಕ್ಕೆಯಾಗಿದ್ದು, ಕಳೆದ ಒಂದು ವಾರದಿಂದ ಜಿಲ್ಲಾ ಆರೋಗ್ಯ ಇಲಾಖೆ ದೈನಂದಿನ ಕೊರೋನ ಅಂಕಿಅಂಶಗಳನ್ನು ಪ್ರಕಟಿಸುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕೊರೋನ ಸೋಂಕಿನ ನೈಜ ಸ್ಥಿತಿಗತಿ ಜನತೆಗೆ ಲಭಿಸುತ್ತಿಲ್ಲ.

ಸೋಮವಾರ 332 ಪಾಸಿಟಿವ್: ರಾಜ್ಯ ಆರೋಗ್ಯ ಇಲಾಖೆ ಇಂದು ಸಂಜೆ ಪ್ರಕಟಿಸಿದ ಕೋವಿಡ್ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಟ್ಟು 332 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ದೃಢ ಪಟ್ಟವರ ಸಂಖ್ಯೆ 16,686ಕ್ಕೇರಿದೆ. ಅಲ್ಲದೇ 195 ಮಂದಿ ಸೋಂಕಿನಿಂದ ಗುಣಮುಖರಾಗಿ ಇಂದು ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಈವರೆಗೆ ಬಿಡುಗಡೆ ಗೊಂಡವರ ಒಟ್ಟು ಸಂಖ್ಯೆ 14,712ಕ್ಕೇರಿದೆ ಎಂದು ಅದು ತಿಳಿಸಿದೆ.

ಅಲ್ಲದೇ ಜಿಲ್ಲೆಯಲ್ಲಿ ಇಂದಿಗೆ ಒಟ್ಟು 1830 ಸಕ್ರೀಯ ಕೋವಿಡ್ ಪ್ರಕರಣಗಳಿದ್ದು, ಇಂದು ಕೋವಿಡ್‌ನಿಂದ ಯಾರೂ ಮೃತಪಟ್ಟ ವರದಿ ಇಲ್ಲ ಎಂದೂ ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News