ಡ್ರಗ್ಸ್ ಪ್ರಕರಣ: ಮಂಗಳೂರಿನಲ್ಲಿ ಮತ್ತೋರ್ವ ಆರೋಪಿ ಬಂಧನ

Update: 2020-09-28 16:00 GMT

ಮಂಗಳೂರು, ಸೆ.28: ಮುಂಬೈನಿಂದ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾದ ಆರೋಪಿಯನ್ನು ನಗರ ಅಪರಾಧ ಪತ್ತೆ ದಳದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಮಂಗಳೂರು ಬೆಂಗರೆ ನಿವಾಸಿ ಶಾನ್ ನವಾಝ್ (35) ಬಂಧಿತ ಆರೋಪಿ. ಈತನ ಮೇಲೆ ಈ ಹಿಂದೆಯೇ ನಗರ ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಾನ್ ನವಾಝ್ ಬಂಧನ ಮೂಲಕ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಮಾದಕ ವಸ್ತು ಎಂಡಿಎಂಎ ಸೇವನೆ ಹಾಗೂ ಮಾರಾಟ ಆರೋಪದಲ್ಲಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ, ಅಕೀಲ್ ನೌಶೀಲ್, ಕೊರಿಯೊ ಗ್ರಾಫರ್ ತರುಣ್‌ರಾಜ್, ಮಣಿಪುರದ ಆಸ್ಕಾ, ಮುಹಮ್ಮದ್ ಶಾಕೀರ್ ಎಂಬವರನ್ನು ಈ ಹಿಂದೆಯೇ ಬಂಧಿಸಲಾಗಿದ್ದು, ತರುಣ್‌ರಾಜ್‌ಗೆ ಜಾಮೀನು ಸಿಕ್ಕಿದೆ.

ಶಾನ್ ಮುಂಬೈನಿಂದ ಮಂಗಳೂರಿನಲ್ಲಿರುವ ಶಾಕೀರ್‌ಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಶಾಕೀರ್‌ನು ನೌಶೀಲ್, ಕಿಶೋರ್‌ಗೆ ಮಾರಾಟ ಮಾಡಿ ಅವರು ನಗರದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News