ತಹಶೀಲ್ದಾರ್ ಕಚೇರಿಗೆ ಶಾಸಕ ಭರತ್ ಶೆಟ್ಟಿ ದಿಢೀರ್ ಭೇಟಿ

Update: 2020-09-28 16:26 GMT

ಮಂಗಳೂರು, ಸೆ.28: ಮಂಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಜನರಿಗೆ ದಾಖಲೆ ಒದಗಿಸದೆ ಸತಾಯಿಸುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಆರ್‌ಟಿಸಿ ಸಹಿತ ದಾಖಲೆಗಳು ಸಿಗುತ್ತಿಲ್ಲ’ ಎಂಬ ಜನರ ದೂರಿಗೆ ಸ್ಪಂದಿಸಿ ದಿಢೀರ್ ದಾಖಲೆ ಪರಿಶೀಲಿಸಿದ ಅವರು, ‘ಸರಿಯಾದ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದೀರಿ. ಜನಪ್ರತಿನಿಧಿಯಾಗಿ ನನಗೆ ಜನರ ಕರೆ ಬರುತ್ತಿದೆ. ಏನು ಮಾಡುತ್ತಿದ್ದೀರಿ, ಕೆಲಸ ಮಾಡಿಸಿ ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕಿ ಬಿಡಿ’ ಎಂದು ತಹಶೀಲ್ದಾರ್ ಗುರುಪ್ರಸಾದ್‌ಗೆ ಸೂಚಿಸಿದರು.

‘ನನ್ನ ಕಚೇರಿಯಲ್ಲಿ ಜನ ಬಂದು ದೂರು ನೀಡುವ ಪ್ರಸಂಗ ಎದುರಿಸುವಂತಾಗಿದೆ. ಇಷ್ಟು ಜನ ಇದ್ದು ದಾಖಲೆ ನೀಡದೆ ತಿಂಗಳು ಗಟ್ಟಲೆ ಏಕೆ ಸತಾಯಿಸುತ್ತಿದ್ದೀರಿ, ಕಡತ ಯಾಕೆ ವಿಲೇವಾರಿ ಆಗುತ್ತಿಲ್ಲ, ಕಾರಣ ಕೊಡಿ. ಇಲ್ಲದಿದ್ದರೆ ಇಲಾಖೆಗೆ ಆದೇಶಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭ ಮಿನಿವಿಧಾನ ಸೌಧದಲ್ಲಿರುವ ವಿವಾಹ ನೋಂದಣಿ ಹಾಗೂ ಭೂದಾಖಲೆ ಪತ್ರಗಳ ರೆಕಾಡರ್ ರೂಮ್, ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಸಾರ್ವಜನಿಕರಿಗೆ ವಿನಾಕಾರಣ ಸತಾಯಿಸದಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News