ಬೆಳ್ತಂಗಡಿ : ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

Update: 2020-09-28 16:41 GMT

ಬೆಳ್ತಂಗಡಿ :  ರೈತ ವಿರೋಧಿ, ಕಾರ್ಮಿಕ ವಿರೋಧಿಯಾಗಿ ಗೋಮುಖ ವ್ಯಾಘ್ರನಂತೆ ವರ್ತಿಸುವ ಬಿಜೆಪಿ ಸರಕಾರದ ನಿಜ ಬಣ್ಣ ಈಗ ಬಯಲಾ ಗುತ್ತಿದೆ ಎಂದು ಮಾಜಿ ಸಚಿವರೂ ಕಾಂಗ್ರೆಸ್ ನ ಹಿರಿಯ ಮುಖಂಡ ಗಂಗಾಧರ ಗೌಡ ಅವರು ಹೇಳಿದರು.

ಅವರು ಇಂದು ಬೆಳ್ತಂಗಡಿ ಯಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತ ವಿರೋಧಿ ಮಸೂದೆಗಳನ್ನು ತರುತ್ತಿರುವ ಬಿಜೆಪಿ ಸರಕಾರಗಳ ವಿರುದ್ಧ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಉಳುವವನೇ ಹೊಲದೊಡೆಯ ಎಂದು ಭೂಸುದರಣಾ ಕಾಯ್ದೆ ಜಾರಿ ಮಾಡಿದ ಕಾಂಗ್ರೇಸನ ನೀತಿಯನ್ನು ಈ ಬಿಜೆಪಿ ಸಂಘ ಪರಿವಾರಗಳು ಯಾವತ್ತೂ ಒಪ್ಪಿಕೊಳ್ಳಲಿಲ್ಲ. ಅಂದು ದೇವರಾಜ ಅರಸು  ಅವರು ಉಳುವವನೇ ಹೊಲದಡೆಯ ಎಂದಿದ್ದರೆ ಇಂದು ಬಿಜೆಪಿ ಉಳ್ಳವನಿಗೆ ಹೊಲ ಎಂದು ಬಡವರ ಭೂಮಿ ಕಸಿಯಲು ಹೊರಟಿದೆ. ಅಂದು ಭೂಮಿ ಪಡೆದ ರೈತರ ಮಕ್ಕಳಿಂದು ಅಂದಿನ ನೋವು ಕಷ್ಟಗಳನ್ನು ತಿಳಿಯದೇ, ಕೋಮುವಾದದ ವಿಷ ಬೀಜವನ್ನುಣ್ಣಿಸಿ ರೈತರಿಗೆ ಭೂಮಿ ಸಿಗಲು ವಿರೋಧವಿದ್ದ ಸಂಘ ಪರಿವಾರದ ಜೊತೆ ಸೇರುವಂತೆ ಮಾಡಿಕೊಂಡು ಇಂದು ರೈತರ ವಿರೋಧಿಯಾಗಿ ಕಾನೂನು ತಿದ್ದುಪಡಿ ಮಾಡುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಸರಕಾರದ ವಿರುದ್ಧ ರೈತಕಾರ್ಮಿಕರ ಆಂದೋಲನ ನಡೆಯಬೇಕು ಎಂದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಆಧಿಕಾರಕ್ಕೆ ಬಂದಿರುವುದು ಜನರ ಮತಗಳಿಂದಲ್ಲ ಹಣದ ಮದದಿಂದಾಗಿದೆ. ಶಾಸಕರನ್ನು ಖರೀಧಿಸಿ ಅಧಿಕಾರಕ್ಕೆ ಬಂದಿರುವ ಸರಕಾರ ಅವರ ಪರವಾಗಿಯೇ ಕೆಲಸ ಮಾಡುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತಾಡಿದ ಕಾರ್ಮಿಕ ಮುಖಂಡರಾದ ನ್ಯಾಯವಾದಿ ಬಿ.ಎಂ.ಭಟ್ ಬಿಜೆಪಿ ಸರಕಾರ ಇಂದು ಭೂಸುಧಾರಣೆಗೆ ತಿದ್ದುಪಡಿ ತಂದು ಬಡ ರೈತರ ಕೈಯಿಂದ ಭೂಮಿ ಕಿತ್ತುಕೊಳ್ಳಲು ಹಾಗೂ ಗುತ್ತಿಗೆ ಕೃಷಿ ಪದ್ಧತಿ ಮೂಲಕ 5 ಎಕ್ರೆ ಒಳಗಿನ ರೈತರ ಭೂಮಿಯನ್ನು ಕಾರ್ಪರೇಟ್ ಕಂಪೆನಿಗಳು ಲೀಸಿಗೆ ಪಡೆಯಲು ಅನುವು ಮಾಡಿಕೊಟ್ಟಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ್ ಭಟ್ ಸವಣಾಲು ಮಾತಾಡುತ್ತಾ ರೈತರಿಗೆ ಮರಣ ಶಾಸನ ಬರೆಯಲು ಹೊರಟ ಬಿಜೆಪಿಯ ಮರಣ ಶಾಸನವನ್ನು ದೇಶದ ರೈತ ಕಾರ್ಮಿಕರು ಬರೆಯಲಿದ್ದಾರೆ ಎಂದರು. ವಿದ್ಯುತ್ ಖಾಸಗೀಕರಣದಿಂದ ರೈತ ಕೃಷಿಗೆ ಉಚಿತ ವಿದ್ಯುತ್ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಿದ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.  ರೈತ ಮುಖಂಡ ಶ್ಯಾಮರಾಜ್ ಪಟ್ರಮೆ ಸ್ವಾಗತಿಸಿ ಕೊನೆಗೆ ಕಾರ್ಮಿಕ ಮುಖಂಡರಾದ ಎಲ್ ಮಂಜುನಾಥ್ ವಂದಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಕರ್ನಾಟಕ ಬಂದ್ ಬೆಂಬಲಿಸಿ ಬೆಳ್ತಂಗಡಿ ನಗರದಲ್ಲಿ ರಸ್ತೆ ತಡೆ ಮಾಡಿದರು. ಪೊಲೀಸರು ತರುವಾಯ ತೆರವುಗೊಳಿಸಿದರು.

ಪ್ರತಿಭಟನೆಯಲ್ಲಿ ಪ್ರದೇಶ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ರಂಜನ್ ಗೌಡ, ಜಿಲ್ಲಾ ಪಂಚಾಯತು ಸದಸ್ಯರುಗಳಾದ ದರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ನಮಿತ, ತಾಲೂಕು ಪಂಚಾಯತ್ ಸದಸ್ಯರಾದ ವಿಟಿ ಸಭಾಸ್ಟೀನ್, ಎಪಿಎಂಸಿ ಸದಸ್ಯ ಕೇಶವ ಗೌಡ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಪ್ರವೀಣ್ ಬಿ.ಜಿ, ಅಶ್ರಫ್ ನೆರಿಯ, ದಯಾನಂದ ಬೆಳಾಲು, ಅನಿಲ್ ಪೈ,  ಮನೋಹರ, ಜಗದೀಶ್, ಗಫೂರ್ ಅಬ್ದುಲ್ ರಹಿಮಾನ್ ಪಡ್ಪು, ರಾಜ್ಯ ರೈತ ಸಂಘದ ತಾಲೂಕು ಮುಖಂಡರು, ಕಾರ್ಮಿಕ ಮುಖಂಡರುಗಳಾದ ಲೋಕೇಶ್, ಜಯರಾಮ ಮಯ್ಯ, ಜಯಶ್ರೀ, ಪುಷ್ಪಾ, ನೆಬಿಸಾ, ರಾಮಚಂದ್ರ, ಕುಮಾರಿ, ಧನಂಜಯ ಗೌಡ,  ಈಶ್ವರಿ, ಶೇಖರ ವಿಜಿ, ಗಣೇಶ ಪ್ರಸಾದ್ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News