ಪವರ್ ಟಿವಿ ವಿರುದ್ಧ ಕೈಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು: ಐವನ್ ಡಿಸೋಜಾ

Update: 2020-09-29 07:55 GMT

ಮಂಗಳೂರು, ಸೆ. 29: ರಾಜ್ಯದ ಬಿಜೆಪಿ ಸರಕಾರ ತನ್ನ ಮೇಲಿನ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪವರ್ ಟಿವಿ ವಿರುದ್ಧ ಕೈಗೊಂಡಿರುವ ದಬ್ಬಾಳಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು. ಮುಖ್ಯಮಂತ್ರಿ ರಾಜೀನಾಮೆ ಪಡೆಯಬೇಕು ಹಾಗೂ ನೇರ ಚುನಾವಣೆಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಕಾರವೊಂದು ತನ್ನ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಯಾಗಿ ದ್ವೇಷ ರಾಜಕಾರಣ ನಡೆಸಿದೆ ಎಂದು ಆರೋಪಿಸಿದರು.

ಬಿಡಿಎ ಪ್ರಕರಣವೊಂದರಲ್ಲಿ 24 ಕೋಟಿ ರೂ.ಗಳ ಹಗರಣ ನಡೆದಿರುವ ಬಗ್ಗೆ ಸಾಕ್ಷ ಸಹಿತ ದಾಖಲೆಗಳಿವೆ. ಈ ಪ್ರಕರಣದಲ್ಲಿ 7.44 ಕೋಟಿ ರೂ. ಶೇಷಾದ್ರಿಪುರಂ ಬ್ಯಾಂಕೊಂದರ ಮೂಲಕ ಮುಖ್ಯಮಂತ್ರಿಯ ಸಂಬಂಧಿಕರು ಪಡೆದಿದ್ದಾರೆ. ಇದಲ್ಲದೆ, ಉಳಿದ ಹಣ ಕೊಲ್ಕತ್ತಾದ ಬ್ಯಾಂಕೊಂದರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸಂಬಂಧಿಕರ ಕಪಂನಿಗೆ ವರ್ಗಾವಣೆಯಾಗಿದೆ. ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆ ದಾಖಲೆ ಇರುವಾಗ ತನಿಖೆ ಆಗಬೇಡವೇ ? ಈ ಬಗ್ಗೆ ಸುದ್ದಿ ಮಾಡಿದ ಚಾನೆಲ್ ಮೇಲೆ ಬಲಪ್ರಯೋಗಿಸುವ ಮೂಲಕ ಜನರ ಬಾಯಿಯನ್ನು ಮುಚ್ಚಿಸಲಾಗದು. 2008ರಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಆಡಳಿತವಿದ್ದಾಗ ಪ್ರೇರಣಾ ಟ್ರಸ್ಟ್ ಪ್ರಕರಣದ ಮೂಲಕ ಅಧಿಕಾರ ಕಳೆದುಕೊಂಡಿದ್ದರು. ಇದೀಗ ಮತ್ತೆ ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣವನ್ನು ಇಲ್ಲಿಗೇ ಬಿಡುವುದಿಲ್ಲ. ರಾಜ್ಯದ ಮೂಲೆ ಮೂಲೆಗೂ ಜನರಿಗೆ ತಲುಪಿಸಲಾಗುವುದು ಎಂದು ಐವನ್ ಡಿಸೋಜಾ ಹೇಳಿದರು.

ಹಿಂದೆ ವಾಚ್‌ನ ವಿಚಾರವೊಂದಕ್ಕೇ ತನಿಖೆಗೆ ಅಂದಿನ ಮುಖ್ಯಮಂತ್ರಿ ಆದೇಶಿಸಿದ್ದರು. ಮಾತ್ರವಲ್ಲದೆ ಡಿ.ಕೆ. ರವಿ ಪ್ರಕರಣಕ್ಕೆ ಸಂಬಂಧಿಸಿ ಆಕ್ಷೇಪ ವ್ಯಕ್ತವಾಗಿದ್ದಾಗ ಸಿಬಿಐಗೆ ವಹಿಸಲಾಗಿತ್ತು. ಆ ಧೈರ್ಯ ಬಿಜೆಪಿಗೆ ಯಾಕಿಲ್ಲ ಎಂದವರು ಪ್ರಶ್ನಿಸಿದರು.

ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ನಡೆದಿರುವ ವ್ಯವಹಾರಗಳ ಕುರಿತಂತೆಯೂ ವಿಧಾನಸಭೆಯಲ್ಲಿ ವಿಪಕ್ಷವಾದ ಕಾಂಗ್ರೆಸ್‌ನ ನಾಯಕರು ಗಮನ ಸೆಳೆದಿದ್ದಾರೆ. ಆದರೆ ಕೋವಿಡ್‌ಗೆ ಸಂಬಂಧಿಸಿ ಯಾವುದೇ ಲೆಕ್ಕಾಚಾರವನ್ನು ಸರಿಯಾಗಿ ಸದನದ ಮುಂದೆ ಸರಕಾರ ಮಂಡಿಸಿಲ್ಲ. ಕೋವಿಡ್ ‌ನಂತಹ ತುರ್ತು ಸಂದರ್ಭದಲ್ಲೂ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್, ಪಿಪಿಇ ಕಿಟ್ ಸಮರ್ಪಕವಾಗಿಲ್ಲ. ರೋಗಿಗಳ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ರಾಜ್ಯದಲ್ಲಿ ಸಂಭವಿಸುತ್ತಿರುವ ಕೋವಿಡ್ ಸಾವು ಪ್ರಕರಣಗಳಲ್ಲಿ ಶೇ. 80ರಷ್ಟು ವೆಂಟಿಲೇಟರ್ ಕೊರತೆಯಿಂದಾಗುತ್ತಿದೆ. ಇದು ಸರಕಾರಿ ಪ್ರಾಯೋಜಿತ ಮರಣ ಎಂದು ಅವರು ಆಪಾದಿಸಿದರು.

ಜನಪರ ಕಾಯಿದೆಗಳನ್ನು ರೂಪಿಸುವುದು ಅಥವಾ ತಿದ್ದುಪಡಿ ಮಾಡುವಲ್ಲಿ ಆಸಕ್ತಿ ತೋರದ ಸರಕಾರ ಕಾರ್ಮಿಕ ಕಾಯ್ದೆ, ಎಪಿಎಂಸಿ, ಪಂಚಾಯತ್ ರಾಜ್, ಭೂಕಂದಾಯ ಮೊದಲಾದ ಕಾಯಿದೆಗಳಿಗೆ ತಿದ್ದುಪಡಿ ಮಾಡಿ ಆದ್ಯಾದೇಶ ತರಲಾಗುತ್ತಿದೆ. ಸಾರ್ವಜನಿಕ ತುರ್ತು ಸಂದರ್ಭಗಳಲ್ಲಿ ಇಂತಹ ಆದ್ಯಾದೇಶಗಳನ್ನು ಮಾಡಬಹುದು. ಆದರೆ ಕೇಂದ್ರ ಸರಕಾರ ಅಂಬಾನಿ, ಅದಾನಿಗೆ ನೆರವಾಗುವುದೇ ತುರ್ತು ಸಂದರ್ಭ ಎಂದು ತಿಳಿದು ಆದ್ಯಾದೇಶ ತರುತ್ತಿದೆ ಎಂದು ಅವರು ಕೇಂದ್ರ ಸರಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಇಬ್ರಾಹೀಂ ಕೋಡಿಜಾಲ್, ಪಿ.ಎಂ. ಮುಸ್ತಫಾ, ಎ.ಸಿ.ಜಯರಾಜ್ ಉಪಸ್ಥಿತರಿದ್ದರು.

ನೈತಿಕತೆ ಇದ್ದಲ್ಲಿ ರಾಜೀನಾಮೆ ನೀಡಿ

ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆಳೆದ ಪವರ್ ಟಿವಿ ಚಾನೆಲ್ ವಿರುದ್ಧದ ಕ್ರಮ ಅಕ್ಷಮ್ಯ. ನೈಜ ವಿಚಾರ ಜನರ ಮುಂದೆ ತಂದಾಗ ಅದರ ವಿರುದ್ಧ ದ್ವೇಷ ಸಾಧಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಕರ್ನಾಟಕದ ಪಾಲಿಗೆ ಇದೊಂದು ಕಪ್ಪು ಚುಕ್ಕೆಯಾಗಿದ್ದು, ನೈತಿಕತೆ ಇದ್ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆ ನೀಡಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News