ಟ್ಯಾಲೆಂಟ್-ಕರ್ನಿರೆ ಟ್ರಸ್ಟ್‌ನಿಂದ ವಿಧವೆಯರಿಗೆ ಹೊಲಿಗೆ ಯಂತ್ರ ವಿತರಣೆ

Update: 2020-09-29 10:48 GMT

ಮಂಗಳೂರು, ಸೆ. 29: ಕೆ.ಎಸ್.ಸೈಯದ್ ಹಾಜಿ ಕರ್ನಿರೆ ಚಾರಿಟೇಬಲ್ ಟ್ರಸ್ಟ್‌ನ ಪ್ರಾಯೋಜಕತ್ವ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಹಯೋಗದಲ್ಲಿ 50 ವಿಧವೆಯರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವು ಟಿಆರ್‌ಎಫ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಈ ಸಂದರ್ಭ ಪ್ರಶಸ್ತಿ ಪುರಸ್ಕೃತ ಮೂವರು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ದಾರಿಮೀಸ್ ಅಸೋಸಿಯೇಶನ್‌ನ ಅಧ್ಯಕ್ಷ ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ‘ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಮಾಜ ಮುಖಿ ಕಾರ್ಯಕ್ರಮದ ಮೂಲಕ ಮನೆಮಾತಾಗಿದೆ. ಸಮಾಜದ ಅರ್ಹ ಶೋಷಿತರನ್ನು ಹುಡುಕಿ ಅವರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ. ಈ ಮಹತ್ತರ ಸೇವೆಯನ್ನು ಇದರ ಫಲಾನುಭವಿ ಗಳು ಸದುಪಯೋಗಪಡಿಸಬೇಕು ಮತ್ತು ಬದುಕಿನ ದಾರಿ ಕಂಡುಕೊಳ್ಳಬೇಕು. ಭವಿಷ್ಯದ ದಿನಗಳಲ್ಲಿ ಇತರರಿಗೆ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಜುಬೈಲ್‌ನ ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಮುಹಮ್ಮದ್ ಅಶ್ರಫ್ ಕರ್ನಿರೆ ‘ಯಾರಿಗೂ ಕೂಡ ಕೇವಲ ಹೆಸರಿಗಾಗಿ ದಾನ ಮಾಡಬೇಡಿ. ಅರ್ಹರಿಗೆ ಮಾತ್ರ ದಾನ ಮಾಡಿ’ ಎಂಬುದಾಗಿ ತನ್ನ ತಾಯಿಯು ಸದಾ ಹೇಳುತ್ತಿದ್ದುದನ್ನು ನೆನಪಿಸಿದರಲ್ಲದೆ, ಇಂದಿನ ಹೊಲಿಗೆ ಯಂತ್ರದ ಫಲಾನುಭವಿಗಳು ತಾವು ಹೊಲಿಗೆ ಮೂಲಕ ದುಡಿದು ಸಂಪಾದಿಸಿದ್ದನ್ನು ಮಕ್ಕಳ ಶಿಕ್ಷಣಕ್ಕೂ ವಿನಿಯೋಗಿಸಿ ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು’ ಎಂದು ಮನವಿ ಮಾಡಿದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಮಂಗಳೂರು ಸೆಂಟ್ರಲ್ ಮಾರ್ಕೆಟ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಎಂ.ಸಿ. ಹುಸೈನ್, ಬೋಂದೆಲ್ ಸೂಪರ್ ಮಾರ್ಕೆಟ್‌ನ ಪಾಲುದಾರ ಕೆ.ಎಸ್. ಅಬೂಬಕರ್ ಕರ್ನಿರೆ, ‘ಉಮ್ಮಗ್ ಒರು ಅಗ’ ಮಂಗಳೂರು ಇದರ ಅಧ್ಯಕ್ಷ ಮುಸ್ತಫ ಅಡ್ಡೂರು ದೆಮ್ಮೆಲೆ, ಟಿಆರ್‌ಎಫ್ ಗೌರವ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ, ‘ನಂಡೊ ಪೆಂಙಳ್’ನ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ ಭಾಗವಹಿಸಿದ್ದರು.

ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಕಾಶ್ ಬಾಂಬಿಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ: ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್. ಕೊಯ್ಯೂರು, ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಎಂ.ಎಚ್.ಮಲಾರ್, ಅಬ್ದುರ್ರಹ್ಮಾನ್ ಗೂಡಿನಬಳಿ ಅವರನ್ನು ಸನ್ಮಾನಿಸಲಾಯಿತು.

50 ಹೊಲಿಗೆ ಯಂತ್ರ: ವಿಧವೆಯರು ಸಮಾಜದಲ್ಲಿ ನೆಮ್ಮದಿಯ ಜೀವನ ಸಾಗಿಸಬೇಕಾದರೆ ಅವರು ಸ್ವಾವಲಂಬಿಯಾಗಬೇಕು ಎಂಬುದನ್ನು ಮನಗಂಡ ಟಿಆರ್‌ಎಫ್ ಸಂಘಟನೆಯು ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಸರ್ವೆ ನಡೆಸಿ ಅರ್ಹ ವಿಧವೆಯರಿಗೆ ಹೊಲಿಗೆ ಯಂತ್ರವನ್ನು ಉಚಿತವಾಗಿ ವಿತರಿಸುವ ಪ್ರಸ್ತಾಪವನ್ನು ಕರ್ನಿರೆ ಟ್ರಸ್ಟ್‌ನ ಮುಂದಿಟ್ಟಿತ್ತು. ಅದಕ್ಕೆ ಸ್ಪಂದಿಸಿದ್ದ ಕರ್ನಿರೆ ಟ್ರಸ್ಟ್‌ನ ಮುಖ್ಯಸ್ಥರು ಟ್ರಸ್ಟ್ ವತಿಯಿಂದ 50 ವಿಧವೆಯರಿಗೆ ಹೊಲಿಗೆ ಯಂತ್ರ ನೀಡಿದ್ದರಲ್ಲದೆ ಇಂದಿನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News