ಇ- ಸಂಜೀವನಿ ಉಚಿತ ಚಿಕಿತ್ಸೆ ಆರಂಭ: ಡಾ. ರತ್ನಾಕರ

Update: 2020-09-29 11:54 GMT

ಮಂಗಳೂರು, ಸೆ.29: ಕೊರೋನ ಸಹಿತ ವಿವಿಧ ಕಾಯಿಲೆಗಳಿಗೆ ಮೊಬೈಲ್ ಆ್ಯಪ್ ಇ- ಸಂಜೀವಿನಿ ಮೂಲಕ ವೈದ್ಯರನ್ನು ವಿಡಿಯೋ ಕಾಲ್ ‌ನಲ್ಲಿ ಸಂಪರ್ಕಿಸಿ ಉಚಿತ ಚಿಕಿತ್ಸೆ ಪಡೆಯುವ ಕೇಂದ್ರ ಸರಕಾರದ ಯೋಜನೆ ಆರಂಭಗೊಂಡಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಇ- ಸಂಜೀವನಿ ದ.ಕ. ಜಿಲ್ಲಾ ನೋಡೆಲ್ ಅಧಿಕಾರಿ ಡಾ. ರತ್ನಾಕರ ತಿಳಿಸಿದರು.

ಕೇಂದ್ರ ಸರಕಾರದ ನ್ಯಾಶನಲ್ ಹೆಲ್ತ್ ಮಿಷನ್ ಯೋಜನೆಯಡಿ ನ್ಯಾಶನಲ್ ಟೆಲಿ ಕನ್ಸಲ್ಟೇಶನ್ ಸರ್ವಿಸ್ ಆರಂಭಗೊಂಡಿದೆ. ರೋಗಿಗಳು ಮನೆಯಲ್ಲೇ ಕುಳಿತು ಇ- ಸಂಜೀವನಿ ಆ್ಯಪ್ ಮೂಲಕ ತಜ್ಞ ವೈದ್ಯರನ್ನು ಸಂಪರ್ಕಿಸಬಹುದು. ವಿಡಿಯೊ ಕಾಲ್ ಮೂಲಕ ರೋಗಿಗಳ ರೋಗ ಲಕ್ಷಣಗಳನ್ನು ತಿಳಿದುಕೊಳ್ಳುವ ವೈದ್ಯರು ಔಷಧ, ಸಲಹೆ, ಮಾರ್ಗದರ್ಶನ ನೀಡುವರು. ರೋಗಿ ಆಸ್ಪತ್ರೆಗೆ ಭೇಟಿ ನೀಡಬೇಕಿದ್ದರೆ ಈ ಬಗ್ಗೆಯೂ ನಿರ್ದೇಶನ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈ ಯೋಜನೆಯಿಂದ ಕೊರೋನ ಸಂದರ್ಭ ರೋಗಿಗಳು ಮನೆಯಲ್ಲಿಯೇ ಕುಳಿತು ತಜ್ಞ ವೈದ್ಯರಿಂದ ಸಲಹೆ, ಚಿಕಿತ್ಸೆ ಪಡೆಯಬಹುದು. ಗ್ರಾಮೀಣ ಪ್ರದೇಶದ ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡಬೇಕಿಲ್ಲ. ಇದು ಉಚಿತ ಯೋಜನೆಯಾಗಿರುವ ಕಾರಣ ವೈದ್ಯರಿಗೆ ಹಣ ಪಾವತಿ ಮಾಡುವುದೂ ತಪ್ಪುತ್ತದೆ ಎಂದರು.

ಇ-ಸಂಜೀವನಿ ಯೋಜನೆಯ ವೆನ್ಲಾಕ್ ಆಸ್ಪತ್ರೆಯ ನೋಡೆಲ್ ಅಕಾರಿ ಡಾ. ಸದಾನಂದ ಪೂಜಾರಿ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ 24 ತಜ್ಞ ವೈದ್ಯರು ಇ-ಸಂಜೀವನಿ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆ್ಯಪ್ ಮೂಲಕ ರೋಗಿ ವೈದ್ಯರನ್ನು ಸಂಪರ್ಕಿಸುವಾಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯರಿರುವ ತಜ್ಞ ವೈದ್ಯರು ಸಲಹೆ, ಚಿಕಿತ್ಸೆ ನೀಡುತ್ತಾರೆ ಎಂದರು.

ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ. ಸದಾಶಿವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News