ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಉಡುಪಿ ಜಿಲ್ಲಾಡಳಿತ

Update: 2020-09-29 14:24 GMT

ಉಡುಪಿ, ಸೆ. 29: ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿರುವ ಉಡುಪಿ ಜಿಲ್ಲಾಡಳಿತ, ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುತ್ತಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮಾಸ್ಕ್ ಧರಿಸದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಕಾರ್ಯವನ್ನು ತೀವ್ರಗೊಳಿಲಾಗುತ್ತಿದೆ.

ಅದಕ್ಕಾಗಿ ಪೊಲೀಸ್ ಹಾಗೂ ಅಬಕಾರಿ ಇಲಾಖೆಯಲ್ಲಿ ಎಎಸ್ಸೈ ಸಹಿತ ಮೇಲಿನ ಅಧಿಕಾರಿಗಳಿಗೆ, ಕಂದಾಯ ಇಲಾಖೆಯಲ್ಲಿ ಕಂದಾಯ ನಿರೀಕ್ಷಕರು ಸೇರಿದಂತೆ ಮೇಲಿನ ಅಧಿಕಾರಿಗಳು, ಗ್ರಾಪಂ ಪಿಡಿಓ ಮತ್ತು ಮೇಲಿನಾಧಿಕಾರಿ ಗಳಿಗೆ ಜಿಲ್ಲಾಧಿಕಾರಿಗಳು ದಂಡ ವಿಧಿಸುವ ಅಧಿಕಾರವನ್ನು ನೀಡಿದ್ದಾರೆ.

ಮನೆಯಿಂದ ಸಾರ್ವಜನಿಕ ಸ್ಥಳಗಳಿಗೆ ಬರುವಾಗ ಪ್ರತಿಯೊಬ್ಬರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬಸ್‌ಗಳಲ್ಲಿ ಮಾತ್ರವಲ್ಲದೆ ವೈಯಕ್ತಿಕವಾಗಿ ಕಾರಿನಲ್ಲಿ ಪ್ರಯಾಣಿಸುವಾಗ, ಬೈಕಿನಲ್ಲಿ ಸವಾರಿ ಮಾಡುವಾಗಲೂ ಕಡ್ಡಾಯ ವಾಗಿ ಮಾಸ್ಕ್ ಧರಿಸಲೇಬೇಕು. ಇಲ್ಲದಿದ್ದರೆ 100ರೂ. ದಂಡ ಪಾವತಿಸಬೇಕಾಗುತ್ತದೆ.

ಕೇಂದ್ರ ಹಾಗೂ ರಾಜ್ಯ ಸರಕಾರದ ಸೂಚನೆಯಂತೆ ಮಾಸ್ಕ್ ಧರಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೊರೋನ ವೈರಸ್ ಹೆಚ್ಚು ತ್ತಿರುವುದರಿಂದ ಈ ಕಾಯಿಲೆಗೆ ಲಸಿಕೆ ಬರುವವರೆಗೆ ಮಾಸ್ಕ್ ಧರಿಸುವುದೊಂದೇ ಪರಿಹಾರ ಮಾರ್ಗವಾಗಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಈವರೆಗೆ ನಗರ ಪ್ರದೇಶ, ಗ್ರಾಮಾಂತರ ಪ್ರದೇಶ ಮತ್ತು ಪೊಲೀಸ್ ಇಲಾಖೆ ಯವರು ಮಾತ್ರ ದಂಡ ವಿಧಿಸುವ ಕಾರ್ಯ ಮಾಡುತ್ತಿದ್ದರೆ, ಈಗ ಕಂದಾಯ ಇಲಾಖೆ ಮತ್ತು ಅಬಕಾರಿ ಇಲಾಖೆಯವರು ಕೂಡ ಜಿಲ್ಲಾಧಿಕಾರಿಗಳ ಸೂಚನೆ ಯಂತೆ ಮಾಸ್ಕ್ ಧರಿಸದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಅದರಂತೆ ಸೆ.28ರಂದು ನಗರಸಭೆ/ಪುರಸಭೆ/ಪಟ್ಟಣ ಪಂಚಾಯತ್ ವ್ಯಾಪ್ತಿ ಯಲ್ಲಿ 8000ರೂ., ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 4,600ರೂ., ಪೊಲೀಸ್ ಇಲಾಖೆಯಿಂದ 40,000ರೂ., ಅಬಕಾರಿ ಇಲಾಖೆಯಿಂದ 600 ರೂ. ಮತ್ತು ಕಂದಾಯ ಇಲಾಖೆಯಿಂದ 2150ರೂ. ದಂಡ ವಸೂಲಿ ಮಾಡಲಾಗಿದೆ. ಹೀಗೆ ಒಂದೇ ದಿನ ಮಾಸ್ಕ್ ಧರಿಸದವರಿಗೆ ಒಟ್ಟು 55,350 ರೂ. ದಂಡನಾ ಶುಲ್ಕ ವಿಧಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,04,150ರೂ. ದಂಡ ವಸೂಲಿ ಮಾಡಲಾಗಿದ್ದು, ಇದರಲ್ಲಿ ಪೊಲೀಸ್ ಇಲಾಖೆಯೇ ಒಟ್ಟು 4,03,700 ರೂ. ದಂಡವನ್ನು ವಸೂಲಿ ಮಾಡಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಸಂಗ್ರಹಿಸಿದ ದಂಡ ಶುಲ್ಕದ ವಿವರ

ಸೆ.28ರವರೆಗೆ ಮಾಸ್ಕ್ ಧರಿಸದಿದಕ್ಕೆ ನಗರಸಭೆ/ಪುರಸಭೆ/ಪಟ್ಟಣ ಪಂಚಾ ಯತ್ ವ್ಯಾಪ್ತಿಯಲ್ಲಿ 1,33,500 ರೂ., ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1,62100 ರೂ., ಪೊಲೀಸ್ ಇಲಾಖೆಯಿಂದ 4,03,700 ರೂ., ಅಬಕಾರಿ ಇಲಾಖೆಯಿಂದ 900 ರೂ. ಕಂದಾಯ ಇಲಾಖೆಯಿಂದ 3950 ರೂ. ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 7,04,150 ರೂ. ದಂಡವನ್ನು ವಿಧಿಸಲಾಗಿದೆ.

ಬಾಡಿಗೆ ವಾಹನದಲ್ಲಿ ಹಾಗೂ ಇತರ ವಾಹನದಲ್ಲಿ ಬೇರೆ ಬೇರೆ ಮಂದಿ ಪ್ರಯಾಣಿಸುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗುತ್ತದೆ. ಆದರೆ ಒಂದೇ ಮನೆಯವರು ಸಂಚರಿಸುವಾಗ ಮಾಸ್ಕ್ ಧರಿಸದಿದ್ದರೂ ವಾಹನದಿಂದ ಇಳಿಯುವಾಗ ಕಡ್ಡಾಯವಾಗಿ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಕ್ರಮ ಜರಗಿಸಲಾಗುವುದು.

-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News