ಉಡುಪಿ ಜಿಲ್ಲೆಯಲ್ಲಿ ಮೀನಿನಂಗಡಿಗೆ ಪರವಾನಿಗೆ ನೀಡದಂತೆ ಡಿಸಿ, ಎಸ್ಪಿಗೆ ಮನವಿ

Update: 2020-09-29 14:59 GMT

ಉಡುಪಿ, ಸೆ.29: ಉಡುಪಿ ಜಿಲ್ಲೆಯಾದ್ಯಂತ ಮೀನು ಮಾರುಕಟ್ಟೆಗಳಿದ್ದು, ಮಹಿಳೆಯರು ವಿವಿಧ ಮಾರುಕಟ್ಟೆಗಳಲ್ಲಿ ನ್ಯಾಯಬದ್ಧವಾಗಿ ಮೀನು ವ್ಯಾಪಾರದ ಕುಲಕಸುಬನ್ನು ನಡೆಸುತ್ತಿದ್ದಾರೆ. ಆದರೂ ಖಾಸಗಿಯವರು ಅಲ್ಲಲ್ಲಿ ಅನಧಿಕೃತವಾಗಿ ಮೀನಿನಂಗಡಿಗಳನ್ನು ತೆರೆಯುತ್ತಿದ್ದಾರೆ. ಜಿಲ್ಲೆಯಾದ್ಯಂತ ಯಾವುದೇ ಮೀನಿನಂಗಡಿಗಳಿಗೆ ಪರವಾನಿಗೆ ನೀಡದಂತೆ ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ.

ಜಿಲ್ಲೆಯಾದ್ಯಂತ ಸುಮಾರು 15 ಸಾವಿರಕ್ಕೂ ಅಧಿಕ ಬಡ ಮೀನುಗಾರ ಮಹಿಳೆಯರು ಅನಾದಿ ಕಾಲದಿಂದಲೂ ನೇರವಾಗಿ ಮೀನು ವ್ಯಾಪಾರ ಕುಲಕಸುಬನ್ನು ಅವಲಂಬಿಸಿಕೊಂಡು ತಮ್ಮ ಕುಟುಂಬವನ್ನು ಸಲಹುತ್ತಿದ್ದಾರೆ. ಹಿಂದುಳಿದ ಬಡ ಮೀನುಗಾರ ಮಹಿಳೆಯರು ಬೇರೆ ಯಾವುದೇ ಉದ್ಯೋಗ ವಿಲ್ಲದೆ ಅನಿವಾರ್ಯವಾಗಿ ಮೀನು ವ್ಯಾಪಾರ ಕಸುಬಿಗೆ ಅಂಟಿಕೊಂಡಿದ್ದಾರೆ.

ಆದರೆ ಇತ್ತೀಚಿನ ಕೆಲ ಸಮಯದಿಂದ ಕೆಲವೆಡೆ ಖಾಸಗಿಯವರು ಅಕ್ರಮ ವಾಗಿ ಮೀನಿನಂಗಡಿಗಳನ್ನು ಸ್ಥಾಪಿಸಿ, ಮೀನುಗಾರ ಮಹಿಳೆಯರ ಕುಲ ಕಸುಬಿಗೆ ಸಂಚಕಾರವನ್ನುಂಟು ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ಮನವಿಯಲ್ಲಿ ದೂರಿದ್ದಾರೆ.

ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ಮೀನಿನಂಗಡಿಗಳನ್ನು ಸ್ಥಾಪಿಸಿರುವುದ ರಿಂದ ಅಧೀಕೃತ ಮೀನು ಮಾರುಕಟ್ಟೆಗಳಲ್ಲಿ ಮಹಿಳೆಯರ ವ್ಯಾಪಾರಕ್ಕೆ ತೊಂದರೆ ಯಾಗಿದೆ. ಆದುದರಿಂದ ಜಿಲ್ಲೆಯಾದ್ಯಂತ ಯಾವುದೇ ಮೀನಿನಂಗಡಿಗಳು ಕಾರ್ಯಾಚರಿಸಲು ಅವಕಾಶ ನೀಡಬಾರದು. ಈಗಾಗಲೇ ಆರಂಭಗೊಂಡಿ ರುವ ಮೀನಿನ ಅಂಗಡಿಗಳಿಂದಾಗಿ ಪರಿಸರ ಮತ್ತು ಜನರ ಆರೋಗ್ಯಕ್ಕೂ ತೊಂದರೆ ಇರುವುದರಿಂದ ಈ ಕೂಡಲೇ ಅವುಗಳನ್ನು ತೆರವುಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಬೇಬಿ ಎಚ್.ಸಾಲ್ಯಾನ್ ಮನವಿಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News