ಡ್ರಗ್ಸ್ ಪ್ರಕರಣ : ನೈಜೀರಿಯ ಪ್ರಜೆಯ ಬಂಧನ

Update: 2020-09-29 16:34 GMT

ಮಂಗಳೂರು, ಸೆ. 29: ಕರಾವಳಿಯ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಮಂಗಳೂರು ಸಿಸಿಬಿ ಪೊಲೀಸರು ನೈಜೀರಿಯ ಪ್ರಜೆಯೊಬ್ಬನನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾದ ಆರೋಪಿಗಳ ವಿಚಾರಣೆ ವೇಳೆ ನೈಜೀರಿಯ ಪ್ರಜೆಯ ಮಾಹಿತಿ ಬೆಳಕಿಗೆ ಬಂದಿತ್ತು. ಈ ಮಾಹಿತಿ ಮೇರೆಗೆ ನೈಜೀರಿಯ ಪ್ರಜೆಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ನೈಜಿರಿಯಾ ಪ್ರಜೆಯು ಈಗಾಗಲೇ ಬಂಧಿತರಾದ ಕೆಲ ಆರೋಪಿಗಳ ಜತೆ ಸೇರಿಕೊಂಡು ಮುಂಬೈ, ಗೋವಾ ಸೇರಿದಂತೆ ವಿವಿಧೆಡೆಯಿಂದ ಕರಾವಳಿ ಭಾಗಕ್ಕೆ ಎಂಡಿಎಂಎ, ಎಲ್‌ಎಸ್‌ಡಿ ಸೇರಿದಂತೆ ಇನ್ನಿತರ ಸಿಥೆಟಿಕ್ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರ ಪೊಲೀಸರು ಸೆ.19ರಂದು ಡ್ಯಾನ್ಸರ್ ಕಿಶೋರ್ ಶೆಟ್ಟಿ, ಅಕೀಲ್ ನೌಶೀಲ್ ಡ್ರಗ್ಸ್ ಸಾಗಾಟ ಆರೋಪದಲ್ಲಿ ಬಂಧಿಸಿದ್ದರು. ಇವರ ವಿಚಾರಣೆ ನಡೆಸಿದಾಗ ನಗರದ ಡ್ರಗ್ಸ್ ಜಾಲದ ಒಂದೊಂದು ಮಾಹಿತಿ ಲಭಿಸಿದ್ದು, ಈ ಹಿಂದೆಯೇ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ.
ಡ್ರಗ್ಸ್ ಜಾಲವು ದಿನದಿಂದ ದಿನಕ್ಕೆ ವಿಸ್ತರಿಸಿಕೊಳ್ಳುತ್ತಲೇ ಇದೆ. ಬಂಧಿತ ಆರೋಪಿಗಳು ನೀಡುವ ಮಾಹಿತಿ ಆಧಾರದಲ್ಲಿ ಇನ್ನು ಹೆಚ್ಚಿನ ಮಂದಿ ಪೊಲೀಸರ ಬಲೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ಸ್ ಹಾಗೂ ಸಿಸಿಬಿ ಪೊಲೀಸರ ತನಿಖೆಯು ಮತ್ತಷ್ಟು ವೇಗ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News