‘ಭಾರತದ ಜಾರ್ಜ್ ಫ್ಲಾಯ್ಡ್ ಘಟನೆ’: ಹತ್ರಸ್ ಯುವತಿಯ ಅತ್ಯಾಚಾರ, ಅಂತ್ಯಕ್ರಿಯೆ ಬಗ್ಗೆ ವಿಪಕ್ಷಗಳ ಆಕ್ರೋಶ

Update: 2020-09-30 14:32 GMT

ಹೊಸದಿಲ್ಲಿ: ಹತ್ರಸ್  ಗ್ರಾಮದ 19 ವರ್ಷದ ದಲಿತ ಯುವತಿಯ ಅತ್ಯಾಚಾರ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿ ಯುವತಿಯ  ಅಂತ್ಯಕ್ರಿಯೆಯನ್ನು ಅವಸರವಸರವಾಗಿ ಪೊಲೀಸರು ನಡೆಸಿದ ಕ್ರಮವನ್ನು ಖಂಡಿಸಿರುವ ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಈ ಘಟನೆಯನ್ನು ಭಾರತದ ‘ಜಾರ್ಜ್ ಫ್ಲಾಯ್ಡ್ ಘಟನೆ’ ಎಂದು ಬಣ್ಣಿಸಿದ್ದಾರೆ.

“ಅಪರಾಧಿಗಳ ಅಂತ್ಯಕ್ರಿಯೆಯನ್ನು ಕೂಡ ಗೌರವದಿಂದ ನಡೆಸಲಾಗುತ್ತದೆ. ಆದರೆ ಇಲ್ಲಿ ಅತ್ಯಾಚಾರ ಸಂತ್ರಸ್ತೆಯ  ಅಂತ್ಯಸಂಸ್ಕಾರವನ್ನು ಪೊಲೀಸರೇ 2.30ಕ್ಕೆ ಕುಟುಂಬ ಸದಸ್ಯರ ಅನುಪಸ್ಥಿಯಲ್ಲಿ ನಡೆಸಿದ್ದಾರೆ. ಆ ಕುಟುಂಬ ದಲಿತ ಸಮುದಾಯಕ್ಕೆ ಸೇರಿಲ್ಲದೇ ಇದ್ದರೆ ಹೀಗಾಗುತ್ತಿತ್ತೇ?, ಇದು ನಾಚಿಕೆಗೇಡಿನ ವಿಷಯ. ನಮ್ಮ ಸ್ವಂತ ಜಾರ್ಜ್ ಫ್ಲಾಯ್ಡ್ ಕ್ಷಣ'' ಎಂದು  ಅಮೆರಿಕಾದಲ್ಲಿ ಕರಿಯ ಜನಾಂಗದ ಜಾರ್ಜ್ ಫ್ಲಾಯ್ಡ್ ಎಂಬವರನ್ನು ಪೊಲೀಸರು ಹತ್ಯೆಗೈದ ಘಟನೆ ಹಾಗೂ ನಂತರದ ಪ್ರತಿಭಟನೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

ರಾಜ್ಯ ಪೊಲೀಸರ ಕ್ರಮ ಖಂಡಿಸಿರುವ ದಲಿತ ನಾಯಕಿ ಹಾಗೂ ಬಿಎಸ್ಪಿಯ ವರಿಷ್ಠೆ ಮಾಯಾವತಿ, ಪೊಲೀಸರ ಕ್ರಮ ಸಂದೇಹ ಹಾಗೂ ಅಸಮಾಧಾನವನ್ನು ಸೃಷ್ಟಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ‘‘ಭೂಗತ ಪಾತಕಿ (ವಿಕಾಸ್ ದುಬೆ)ಗೆ ಕೂಡ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸುವ ಮೂಲಭೂತ ಗೌರವವನ್ನು ನೀಡಲಾಗಿದೆ. ಹಾಥರಸ್ ಸಂತ್ರಸ್ತೆಯ ಪೋಷಕರೊಂದಿಗೆ ಈ ರೀತಿ ಅನುಚಿತವಾಗಿ ವರ್ತಿಸಿರುವುದು ಯಾಕೆ? ಒಂದು ವೇಳೆ ಜಾತಿ ಹಾಗೂ ವರ್ಗ ತಾರತಮ್ಯಕ್ಕೆ ಪೇಟೆಂಟ್ ಇಲ್ಲದಿದ್ದರೆ, ಇದೇನು ?’’ ಎಂದು ಪ್ರಶ್ನಿಸಿ ಎಐಎಂಐಎಂನ ಅಧ್ಯಕ್ಷ ಅಸದುದ್ದೀನ್ ಉವೈಸಿ ಟ್ವೀಟ್ ಮಾಡಿದ್ದಾರೆ. ಈ ನಡುವೆ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಹಾಥ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುವಂತೆ, ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ, ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ಕಠಿಣ ಕಾನೂನು ರೂಪಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ಇತರ ಉನ್ನತ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದ್ದಾರೆ.

“ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸಿದ ರೀತಿ ಅವಮಾನಕಾರಿ ಮತ್ತು ಅನ್ಯಾಯದಿಂದ ಕೂಡಿದೆ. ಭಾರತದ ಪುತ್ರಿಯನ್ನು ಅತ್ಯಾಚಾರಗೈದು ಕೊಲೆಗೈಯ್ಯಲಾಗಿದೆ, ವಾಸ್ತವವನ್ನು ಮುಚ್ಚಿ ಹಾಕಲಾಗಿದೆ ಹಾಗೂ ಅಂತಿಮವಾಗಿ ಅಂತ್ಯಕ್ರಿಯೆ ನಡೆಸುವ ಹಕ್ಕುಗಳನ್ನೂ ಸೆಳೆಯಲಾಗಿದೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಒವೈಸಿ ಪ್ರತಿಕ್ರಿಯಿಸಿ ``ವಿಕಾಸ್ ದುಬೆಯಂತಹ ಗ್ಯಾಂಗ್‍ ಸ್ಟರ್ ನ ಅಂತ್ಯಕ್ರಿಯೆ ಕೂಡ  ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದೆ. ಆದರೆ ಹತ್ರಸ್ ಸಂತ್ರಸ್ತೆಯ ಕುಟುಂಬವನ್ನು ಏಕೆ ಅವಮಾನಿಸಲಾಯಿತು?  ಇದು ಜಾತಿ ತಾರತಮ್ಯವಲ್ಲದೆ ಮತ್ತಿನ್ನೇನು?'' ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News