ಧರ್ಮಧಾರಿತ ನ್ಯಾಯದಿಂದ ದೇಶ ತಾಲಿಬಾನೀಕರಣ: ಎಸ್.ಬಿ. ದಾರಿಮಿ

Update: 2020-09-30 16:52 GMT

ಮಂಗಳೂರು, ಸೆ.30: ಕಾನೂನು ವ್ಯವಸ್ಥೆಯೊಂದಿಗಿನ ಪ್ರಜೆಗಳ ನಿರಾಸಕ್ತಿ ಅನ್ಯಾಯವನ್ನು ಇನ್ನಷ್ಟು ಪ್ರಚೋದಿಸುತ್ತದೆ. ನ್ಯಾಯದ ನಿರಾಕರಣೆ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿಸುತ್ತದೆ. ಧರ್ಮದ ಆಧಾರದಲ್ಲಿ ನ್ಯಾಯ ತೀರ್ಮಾನವಾದರೆ ಅದು ದೇಶವನ್ನು ತಾಲಿಬಾನೀಕರಣಗೊಳಿಸುವುದೆಂದೇ ಅರ್ಥೈಸಲಾಗುತ್ತದೆ ಎಂದು ಉಸ್ತಾದ್ ಎಸ್.ಬಿ. ದಾರಿಮಿ ಅಭಿಪ್ರಾಯಪಟ್ಟಿದ್ದಾರೆ.

ದೇಶವನ್ನೇ ತಲ್ಲಣಗೊಳಿಸಿದ್ದ ಬಾಬರಿ ಮಸೀದಿಯ ಧ್ವಂಸ ಪ್ರಕ್ರಿಯೆ ಆಕಸ್ಮಿಕ. ಇದಕ್ಕೆ ಸಂಬಂಧಿಸಿದಂತೆ ಯಾರೂ ದೋಷಿಗಳಲ್ಲ ಎಂಬುದಾಗಿ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿನಿಂದ ಕೋಟ್ಯಂತರ ಭಾರತೀಯರಿಗೆ ನಿರಾಶೆ ಉಂಟಾಗಿದೆ. ನ್ಯಾಯದ ನಿರಾಕರಣೆಯು ಅರಾಜಕತೆಗೆ ರಹದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ತೀರ್ಪನ್ನು ಮರುಪರಿಶೀಲಿಸಿ ದೇಶದಲ್ಲಿ ನ್ಯಾಯ ಪಾಲನೆಯಾಗುತ್ತಿದೆ ಎಂಬ ಭಾವನೆ ಜನರಿಗೆ ಮೂಡಿಸಬೇಕಾದ ಜವಾಬ್ದಾರಿ ನ್ಯಾಯಾಲಯ ಕ್ಕಿದೆ. ನ್ಯಾಯ ನಿರಾಕರಿಸಲ್ಪಟ್ಟರೆ ಅದು ಅರಾಜಕತೆಗೆ ರಹದಾರಿ ಒದಗಿಸಿದಂತಾಗುತ್ತದೆ. ದೇಶದಲ್ಲಿ ಜಾತಿಗೊಂದು ಇಬ್ಬಗೆಯ ನೀತಿಯಿದೆ. ಎಲ್ಲ ಜಾತಿ ಜನಾಂಗದವರು ದೇಶದೊಂದಿಗೆ ಬದ್ಧತೆ ಪ್ರದರ್ಶಿಸುವುದಕ್ಕೆ ಅದು ಅಡ್ಡಿಯಾಗುತ್ತದೆ ಎಂದರು.

ಆಧುನಿಕ ನಾಗರಿಕತೆಯ ಅಡಿಪಾಯವೇ ಮಾನವೀಯ ಮೌಲ್ಯಗಳ ಆಧಾರದಲ್ಲಿ ದೇಶವನ್ನು ಮುನ್ನಡೆಸುವುದಾಗಿದೆ. ಅದರಿಂದ ಹಿಂದೆ ಸರಿಯುವುದೆಂದರೆ ನಾವು ಅನಾಗರಿಕತೆಯನ್ನು ಒಪ್ಪಿಕೊಂಡಂತಾಗುತ್ತದೆ. ದೇಶದಲ್ಲಿ ನ್ಯಾಯ ಮರೀಚಿಕೆಯಾಗುವ ಪರಿಸ್ಥಿತಿ ಉಂಟಾಗದಂತೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಉಸ್ತಾದ್ ಎಸ್.ಬಿ. ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News