ತೃತೀಯ ಲಿಂಗಿಗಳ ಪ್ರಮಾಣಪತ್ರ: ಸರಕಾರದ ಮಾಹಿತಿ

Update: 2020-09-30 17:45 GMT

ಹೊಸದಿಲ್ಲಿ, ಸೆ.30: ತಾವು ಪುರುಷರೇ ಅಥವಾ ಮಹಿಳೆಯರೇ ಎಂದು ಘೋಷಿಸುವ ಮುನ್ನ ತೃತೀಯ ಲಿಂಗಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸೋಮವಾರ ಜಾರಿಗೊಳಿಸಿರುವ ತೃತೀಯ ಲಿಂಗಿ ವ್ಯಕ್ತಿಗಳ(ಹಕ್ಕು ರಕ್ಷಣೆ) ಮಸೂದೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಜುಲೈಯಲ್ಲಿ ಕೇಂದ್ರ ಸರಕಾರ ಕರಡು ಮಸೂದೆ ಜಾರಿಗೊಳಿಸಿ ಸಲಹೆ, ಆಕ್ಷೇಪಗಳಿದ್ದರೆ ಸಲ್ಲಿಸುವಂತೆ ಸೂಚಿಸಿತ್ತು. ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಯು ವ್ಯಕ್ತಿಯ ಲಿಂಗವನ್ನು ಪರೀಕ್ಷಿಸಿ ದೃಢೀಕರಿಸಬೇಕೆಂದು ಕರಡು ಮಸೂದೆಯಲ್ಲಿ ತಿಳಿಸಿರುವುದನ್ನು ತೃತೀಯ ಲಿಂಗಿ ಸಮುದಾಯ ಆಕ್ಷೇಪಿಸಿತ್ತು. ಈ ಮಸೂದೆಯು ತೃತೀಯ ಲಿಂಗಿ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೆ ಬಲವಂತಗೊಳಿಸುತ್ತದೆ ಎಂದು ಟೀಕೆ ವ್ಯಕ್ತವಾಗಿತ್ತು. 

ಈ ಹಿನ್ನೆಲೆಯಲ್ಲಿ ಮಸೂದೆಯಲ್ಲಿ ಬದಲಾವಣೆ ಮಾಡಲಾಗಿದ್ದು, ತಮ್ಮ ಲಿಂಗದ ಬಗ್ಗೆ ತೃತೀಯ ಲಿಂಗಿ ವ್ಯಕ್ತಿ ನೀಡುವ ಅಫಿಡವಿಟ್ ನ ಆಧಾರದಲ್ಲಿ ಜಿಲ್ಲಾಧಿಕಾರಿ ಪ್ರಮಾಣಪತ್ರ ನೀಡಬೇಕು . ಇದಾದ 30 ದಿನದೊಳಗೆ ಈ ವ್ಯಕ್ತಿಗಳಿಗೆ ಗುರುತು ಪತ್ರ ದೊರಕುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ. ಜೊತೆಗೆ, ತೃತೀಯ ಲಿಂಗಿ ವ್ಯಕ್ತಿ ವೈದ್ಯಕೀಯ ಪ್ರಕ್ರಿಯೆಯ ಮೂಲಕ ತನ್ನ ಲಿಂಗ ಪರಿವರ್ತನೆಗೆ ನಿರ್ಧರಿಸಿದರೆ, ಆಗ ಸಂಬಂಧಿತ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ನೀಡುವ ಪ್ರಮಾಣಪತ್ರದ ಜೊತೆಗೆ, ಹೊಸ ಅರ್ಜಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಮಕ್ಕಳು ತೃತೀಯ ಲಿಂಗಿಗಳಾಗಿದ್ದ ಸಂದರ್ಭ ಅವರ ಪರವಾಗಿ ಹೆತ್ತವರು ಅರ್ಜಿ ಸಲ್ಲಿಸಬಹುದು. ಹೊಸ ನಿಯಮ ಜಾರಿಗೆ ಬರುವ ಮುನ್ನ ಲಿಂಗ ಪರಿವರ್ತನೆ ನಡೆಸಿದವರು ಗುರುತು ಪತ್ರಕ್ಕೆ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕು ರಕ್ಷಣೆಗೆ ಮತ್ತು ಅವರಿಗೆ ಲಭ್ಯವಾಗುವ ಕಲ್ಯಾಣ ಯೋಜನೆಗಳನ್ನು ಪಡೆಯಲು ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಕಲ್ಯಾಣ ಮಂಡಳಿಯನ್ನು ರಚಿಸುವಂತೆ ಸಲಹೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News