ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐಜಿಬಿಸಿ ವಿದ್ಯಾರ್ಥಿ ಅಧ್ಯಾಯ ಪ್ರಾರಂಭ

Update: 2020-10-01 06:24 GMT

ಮಂಗಳೂರು, ಅ.1: ತನ್ನ ಸ್ವಚ್ಛ ಮತ್ತು ಹಸಿರು ಉಪಕ್ರಮಗಳನ್ನು ಬಲಪಡಿಸಲು, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ (ಐಜಿಬಿಸಿ) ವಿದ್ಯಾರ್ಥಿ ಅಧ್ಯಾಯದ ವರ್ಚುವಲ್ ಲಾಂಚ್ ಅನ್ನು ಆಯೋಜಿಸಿದೆ.

ಎಸ್‌ಜೆಇಸಿ-ಐಜಿಬಿಸಿ ವಿದ್ಯಾರ್ಥಿ ಅಧ್ಯಾಯವು ಸುಸ್ಥಿರ ನಾಳೆಗಾಗಿ ಹಸಿರು ವಿಧಾನವನ್ನು ಹುಟ್ಟುಹಾಕಲು, ಪ್ರೇರೇಪಿಸಲು ಮತ್ತು ಅಳವಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ವಿಶ್ವ ಹಸಿರು ಕಟ್ಟಡ ವಾರದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಐಜಿಬಿಸಿ ಮಂಗಳೂರು ಅಧ್ಯಾಯದ ಅಧ್ಯಕ್ಷ ಡಿ.ಬಿ.ಮೆಹ್ತಾ ಮಾತನಾಡಿ, ಹಸಿರು ಹೆಜ್ಜೆಗುರುತಿನಲ್ಲಿ ಐಜಿಬಿಸಿಯ ಸಾಧನೆಗಳು ಮತ್ತು ಹಸಿರು ನಿರ್ಮಾಣದ ವ್ಯಾಪ್ತಿಯನ್ನು ವಿವರಿಸಿದರು.

ಇನ್ನೋರ್ವೆ ಅತಿಥಿ ಐಜಿಬಿಸಿಯ ಕೌನ್ಸಿಲರ್ ರೇಖಾ ಮಾವುಲತಿ ಮಾತನಾಡಿ, ಹಸಿರು ಕಟ್ಟಡ ಪರಿಕಲ್ಪನೆಗಳು ಮತ್ತು ಹಸಿರು ಶಿಕ್ಷಣ ಕಾರ್ಯಕ್ರಮ ಕುರಿತು ತಾಂತ್ರಿಕ ಭಾಷಣವನ್ನು ಪ್ರಸ್ತುತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರಿಯೊ ಡಿಸೋಜ ಮಾನವ ಜೀವನದ ಸುಧಾರಣೆಗೆ ಸುಸ್ಥಿರ ತಂತ್ರಜ್ಞಾನವನ್ನು ಉತ್ತೇಜಿಸಲು ಎಸ್‌ಜೆಇಸಿ ಕೈಗೊಂಡ ಹಸಿರು ಉಪಕ್ರಮಗಳ ಬಗ್ಗೆ ವಿವರಿಸಿದರು.

ಸ್ವಾಗತಿಸಿ ಮಾತನಾಡಿದ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಯಜ್ಞೇಶ್ವರನ್ ಬಿ. ಹಸಿರು ಶಿಕ್ಷಣ ಕಾರ್ಯಕ್ರಮದ ಅಗತ್ಯದ ಬಗ್ಗೆ ಮಾಹಿತಿ ನೀಡಿದರು.

ಭಾಗವಹಿಸುವವರಿಗೆ ಹಸಿರು ಶಿಕ್ಷಣ ಕಾರ್ಯಕ್ರಮದ ವಿವಿಧ ಮಾಡ್ಯೂಲ್‌ಗಳನ್ನು ಪರಿಚಯಿಸಲಾಯಿತು ಮತ್ತು ಹಸಿರು ಕಟ್ಟಡದ ಪರಿಕಲ್ಪನೆಗಳ ಬಗ್ಗೆ ಚರ್ಚಿಸಲಾಯಿತು.

ಎಸ್‌ಜೆಇಸಿ-ಐಜಿಬಿಸಿ ವಿದ್ಯಾರ್ಥಿ ಅಧ್ಯಾಯದ ಸಂಯೋಜಕ ಪ್ರಶಾಂತ್ ಕುರ್ಡೇಕರ್ ಈ ವರ್ಚುವಲ್ ಕಾರ್ಯಕ್ರಮವನ್ನು ಆಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News