ಮಂಗಳೂರು: ರೆಡ್‌ಕ್ರಾಸ್‌ನಿಂದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ

Update: 2020-10-01 08:08 GMT

ಮಂಗಳೂರು, ಅ.1: ಭಾರತೀಯ ರೆಡ್‌ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಮತ್ತು 100ಕ್ಕೂ ಅಧಿಕ ರಕ್ತದ ಯುನಿಟ್‌ಗಳನ್ನು ಸಂಗ್ರಹಿಸಿದ ಸಂಘಸಂಸ್ಥೆಗಳು ಮತ್ತು ಪ್ರತಿನಿಧಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಇಂದು ನಡೆಯಿತು.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ತದಾನದ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘಸಂಸ್ಥೆಗಳನ್ನು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಭಿನಂದಿಸಿದರು.

ರಕ್ತದಾನ ಒಬ್ಬ ವ್ಯಕ್ತಿಗೆ ಮತ್ತೊಮ್ಮೆ ಜೀವದಾನ ಮಾಡುವ ಪುಣ್ಯದ ಕೆಲಸವಾಗಿದೆ. ಇಂತಹ ಮಹತ್ವದ ಕಾರ್ಯದಲ್ಲಿ ಹಲವಾರು ಸಂಘ ಸಂಸ್ಥೆಗಳು ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್‌ನಿಂದ 18 ಸಾವಿರ ಮಂದಿ ಗುಣಮುಖರಾಗಿದ್ದಾರೆ. ಸಕ್ಕರೆ ಕಾಯಿಲೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದ ಶೇ.50ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸ್ವ ಜಾಗೃತಿ, ಸತತ ಮಾಸ್ಕ್ ಬಳಕೆಯಿಂದ ಕೋವಿಡ್ ಸೋಂಕು ಬರಡದಂತೆ ತಡೆಯಬಹುದು ಎಂದು ಡಾ. ರಾಜೇಂದ್ರ ಹೇಳಿದರು.

ಇದೇ ಸಂದರ್ಭ 100ಕ್ಕೂ ಅಧಿಕ ರಕ್ತದ ಯುನಿಟ್‌ಗಳನ್ನು ಸಂಗ್ರಹಿಸಿದ 18 ಸಂಘಸಂಸ್ಥೆಗಳನ್ನು ಗೌರವಿಸಲಾಯಿತು. ಅಲ್ಲದೆ ಕೊರೋನ ಸೋಂಕಿತರಿಗೆ ಸಂಜೀವಿನಿಯಾಗಿರುವ ಪ್ಲಾಸ್ಮಾವನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ನೀಡಲು ಸ್ವಯಂಪ್ರೇರಣೆಯಿಂದ ಸಿದ್ಧವರ ಪೈಕಿ 10 ಮಂದಿಯನ್ನು ಸಾಂಕೇತಿಕವಾಗಿ ಗೌರವಿಸಲಾಯಿತು.

ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ಮೋನಾ ರಾವ್, ಬ್ಲಡ್ ಬ್ಯಾಂಕ್ ಉಪ ಸಮಿತಿಯ ಮುಖ್ಯಸ್ಥಡಾ.ಯು.ವಿ.ಶೆಣೈ ಉಪಸ್ಥಿತರಿದ್ದರು.
 ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಎ.ಪ್ರಭಾಕರ ಶರ್ಮ ಸ್ವಾಗತಿಸಿದರು. ಯತೀಶ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.


ವೆನ್ಲಾಕ್‌ಲ್ಲಿ ಶೀಘ್ರ ಪ್ಲಾಸ್ಮಾ ಥೆರಪಿ
 ರೆಡ್‌ಕ್ರಾಸ್ ನೇತೃತ್ವದಲ್ಲಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಕ್ತದಾನ ಮತ್ತು ಪ್ಲಾಸ್ಮಾ ದಾನದ ಮಹತ್ವವನ್ನು ಸಾರುವ ಕೆಲಸವನ್ನು ಜಿಲ್ಲಾಡಳಿತ ಕೈಗೆತ್ತಿಕೊಳ್ಳಲಿದೆ. ಸಮಾಜದಲ್ಲಿ ಪ್ಲಾಸ್ಮಾ ದಾನಿಗಳ ಸಂಖ್ಯೆ ಹೆಚ್ಚಾದಲ್ಲಿ ಹೆಚ್ಚಿನ ಮಂದಿ ಕೋವಿಡ್ ರೋಗಿಗಳು ಶೀಘ್ರ ಗುಣಮುಖರಾಗಲು ಸಾಧ್ಯವಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಕಾರ್ಯ ಶೀಘ್ರವೇ ಆರಂಭವಾಗಲಿದೆ. ಥೆರಪಿ ಮಿಶಿನ್ ಈಗಾಗಲೇ ಬಂದಿದ್ದು, ಸರಕಾರದಿಂದ ಅನುಮತಿ ಸಿಕ್ಕಿದ ತಕ್ಷಣ ಚಾಲನೆ ದೊರೆಯಲಿದೆ.
*ಡಾ.ಕೆ.ವಿ.ರಾಜೇಂದ್ರ, ದ.ಕ.ಜಿಲ್ಲಾಧಿಕಾರಿ


ಕಚೇರಿ ಸಿಬ್ಬಂದಿಯಿಂದ ಪ್ಲಾಸ್ಮಾ ದಾನಕ್ಕೆ ಪ್ರೋತ್ಸಾಹ
ಕೊರೋನ ಸಂದರ್ಭದಲ್ಲಿ ಪ್ಲಾಸ್ಮಾ ದಾನ ಅತೀ ಪ್ರಮುಖವಾಗಿದೆ. ಬ್ಯಾಂಕ್ ಆಫ್ ಬರೋಡಾದ ಶಾಖೆಗಳಲ್ಲಿ ಸಿಬ್ಬಂದಿ ಮೂಲಕ ಪ್ಲಾಸ್ಮಾ ದಾನಕ್ಕೆ ಉತ್ಸಾಹ ತೋರಿದ್ದು, ಅದಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಒದಗಿಸಲಾಗುವುದು. * ಸುಜಯ ಯು.ಶೆಟ್ಟಿ, ಮುಖ್ಯಸ್ಥರು, ಮಂಗಳೂರು ವಲಯ, ಬ್ಯಾಂಕ್ ಆ್ ಬರೋಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News