ಆದಿತ್ಯನಾಥ್ ಅವರನ್ನು ಗೋರಖನಾಥ ಮಠಕ್ಕೆ ವಾಪಸ್ ಕಳುಹಿಸಿ ಎಂದ ಮಾಯಾವತಿ

Update: 2020-10-01 13:21 GMT

ಲಕ್ನೋ: “ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ತಮ್ಮ ರಾಜ್ಯದ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಅಸಾಧ್ಯವಾದರೆ ಅವರು ರಾಜೀನಾಮೆ ನೀಡಬೇಕು, ಬಿಜೆಪಿ ಅವರನ್ನು ಅವರ ಗೋರಖನಾಥ ಮಠಕ್ಕೆ ವಾಪಸ್ ಕಳುಹಿಸಬೇಕು,'' ಎಂದು ಬಿಎಸ್‍ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

ಹಥ್ರಸ್ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಮಾತನಾಡಿದ ಮಾಯಾವತಿ “ಮಹಿಳೆಯರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರಿಗೆ ಸಾಧ್ಯವಿಲ್ಲವೆಂದಾದರೆ ಅವರು ರಾಜೀನಾಮೆ ನೀಡಲಿ. ಅವರನ್ನು ಅವರ ಸ್ಥಳವಾದ ಗೋರಖನಾಥ ಮಠಕ್ಕೆ ವಾಪಸ್ ಕಳುಹಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇನೆ.  ಅವರಿಗೆ ಆ ದೇವಳ ಇಷ್ಟವಾಗದೇ ಇದ್ದಲ್ಲಿ ಅವರಿಗೆ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ವಹಿಸಬೇಕು,'' ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆದಿತ್ಯನಾಥ್ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು ಕೇಂದ್ರ ಸರಕಾರ ಆರೆಸ್ಸೆಸ್ ಜತೆ ಸಮಾಲೋಚಿಸಿ ಮುಖ್ಯಮಂತ್ರಿಯನ್ನು ಬದಲಾಯಿಸಬೇಕು ಇಲ್ಲವೇ ಇದ್ದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದರು.

ಸಂತ್ರಸ್ತೆಯ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸದೆ ಪೊಲೀಸರೇ ರಾತ್ರೋರಾತ್ರಿ ಅಂತ್ಯಕ್ರಿಯೆ ನಡೆಸಿದ ಕುರಿತು ಪ್ರತಿಕ್ರಿಯಿಸಿದ ಮಾಯಾವತಿ ಈ ಕೃತ್ಯ ಸಾಕಷ್ಟು ಸಂಶಯ ಮತ್ತು ಆಕ್ರೋಶ ಮೂಡಿಸುತ್ತದೆ, ಸುಪ್ರೀಂ ಕೋರ್ಟ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News