ನ್ಯಾಯಾಂಗ ನಿಂದನೆ ಪ್ರಕರಣ: ತೀರ್ಪು ಮರು ಪರಿಶೀಲನೆಗೆ ಕೋರಿ ಪ್ರಶಾಂತ್ ಭೂಷಣ್ ಸುಪ್ರೀಂಗೆ ಮನವಿ

Update: 2020-10-01 17:29 GMT

ಹೊಸದಿಲ್ಲಿ, ಅ. 1: ನ್ಯಾಯಾಂಗದ ಕುರಿತ ತನ್ನ ಎರಡು ಟ್ವೀಟ್‌ಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 1 ರೂಪಾಯಿ ದಂಡ ಪಾವತಿಸಬೇಕು ಅಥವಾ ಮೂರು ತಿಂಗಳು ಜೈಲು ವಾಸ ಅನುಭವಿಸಬೇಕು ಹಾಗೂ ಮೂರು ವರ್ಷ ವಕೀಲ ವೃತ್ತಿಗೆ ನಿಷೇಧ ವಿಧಿಸಿ ಆಗಸ್ಟ್ 31ರಂದು ನೀಡಿರುವ ಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಪ್ರಶಾಂತ್ ಭೂಷಣ್ ಗುರುವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಸೆಪ್ಟಂಬರ್ 14ರಂದು ಈಗಾಗಲೇ 1 ರೂಪಾಯಿ ದಂಡ ಪಾವತಿಸಿರುವ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ಸೆಪ್ಟಂಬರ್ 14ರಂದು ಸಲ್ಲಿಸಿದ ಮೊದಲ ಮರು ಪರಿಶೀಲನಾ ಅರ್ಜಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನನ್ನು ದೋಷಿ ಎಂದು ಪರಿಗಣಿಸಿ ನೀಡಿದ ತೀರ್ಪನ್ನು ಪ್ರಶ್ನಿಸಿದೆ. ಎರಡನೇ ಮರು ಪರಿಶೀಲನಾ ಅರ್ಜಿ ಆಗಸ್ಟ್ 31ರಂದು ತನಗೆ ದಂಡ ಹೇರಿ ನೀಡಿದ ಶಿಕ್ಷೆಯ ಆದೇಶದ ವಿರುದ್ಧ ಸಲ್ಲಿಸಲಾಗಿದೆ.

ನ್ಯಾಯವಾದಿ ಕಾಮಿನಿ ಜೈಸ್ವಾಲ್ ಮೂಲಕ ಸಲ್ಲಿಸಲಾದ ಎರಡನೇ ಮರು ಪರಿಶೀಲನಾ ಅರ್ಜಿಯಲ್ಲಿ, ಪ್ರಶಾಂತ್ ಭೂಷಣ್, ಪ್ರಕರಣದ ಕುರಿತು ಮುಕ್ತ ನ್ಯಾಯಾಲಯದಲ್ಲಿ ಮೌಖಿಕ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

 ಪ್ರಚೋದಿತ ತೀರ್ಪನ್ನು ಹಿಂದೆ ತೆಗೆಯುವಂತೆ ಹಾಗೂ ಹೊಸ ವಿಚಾರಣೆ ನಡೆಸುವಂತೆ ಮನವಿಯಲ್ಲಿ ಕೋರಿರುವ ಅವರು, ತಾನು ಎತ್ತಿದ ಕಾನೂನು ಸಂಬಂಧಿ ಪ್ರಶ್ನೆಗಳನ್ನು ಸೂಕ್ತ ಸದಸ್ಯ ಬಲವುಳ್ಳ ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಕೋರಿದ್ದಾರೆ.

ನ್ಯಾಯಾಂಗ ನಿಂದನೆಯ ಕುರಿತು ದಾಖಲಿಸಿದ ಅರ್ಜಿಯ ಪ್ರತಿಯನ್ನು ಪ್ರಶಾಂತ್ ಭೂಷಣ್ ಅವರಿಗೆ ಪೂರೈಕೆ ಮಾಡಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಈಗಾಗಲೇ ಗಮನಕ್ಕೆ ತೆಗೆದುಕೊಂಡಿತ್ತು ಎಂದು ಮನವಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News