ಬಾಬರಿ ಮಸೀದಿ ಧ್ವಂಸ ಪ್ರಕರಣ: ಪಾಕ್ ಬೇಹು ಸಂಸ್ಥೆಗಳ ಪಾತ್ರದ ತನಿಖೆ ನಡೆದಿಲ್ಲ; ಕೋರ್ಟ್

Update: 2020-10-01 18:07 GMT

 ಲಕ್ನೋ, ಅ. 1: ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆಯ ವ್ಯಕ್ತಿಗಳು ಭಾರತ ಪ್ರವೇಶಿಸಿರಬಹುದು ಹಾಗೂ ಕೋಮು ಗಲಭೆ ಸೃಷ್ಟಿಸಲು ಅಯೋಧ್ಯೆಯಲ್ಲಿರುವ ವಿವಾದಿತ ರಾಮಜನ್ಮಭೂಮಿ-ಬಾಬರಿ ಮಸೀದಿಗೆ ಹಾನಿ ಮಾಡಿರಬಹುದು ಎಂಬ ಬಗೆಗಿನ ಪ್ರಮುಖ ರಹಸ್ಯ ಮಾಹಿತಿಯ ಬಗ್ಗೆ ಸಿಬಿಐ ತನಿಖೆ ನಡೆಸಿಲ್ಲ ಎಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಬುಧವಾರ ನೀಡಿದ್ದ ತೀರ್ಪಿನಲ್ಲಿ ಹೇಳಿದೆ.

 ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಮಂದಿ ಗಣ್ಯ ವ್ಯಕ್ತಿಗಳ ವಿರುದ್ಧದ ಬಾಬರಿ ಮಸೀದಿ ಧ್ವಂಸಗೊಳಿಸುವ ಕ್ರಿಮಿನಲ್ ಸಂಚು ಹಾಗೂ ಇತರ ಆರೋಪಗಳು ಸಾಬೀತಾಗಿಲ್ಲ ಎಂದು ಪ್ರತಿಪಾದಿಸುವ ಸಂದರ್ಭ ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ್ ಹಲವು ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಯ ಅಸಂಗತೆಗಳನ್ನು ಉಲ್ಲೇಖಿಸಿದರು. ಹಿಂದಿಯಲ್ಲಿ ಬರೆದ 2,300 ಪುಟಗಳ ದೀರ್ಘ ತೀರ್ಪಿನಲ್ಲಿ ನ್ಯಾಯಮೂರ್ತಿ, ಬಾಬರಿ ಮಸೀದಿ ಧ್ವಂಸದಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸದೇ ಇರುವುದು ಮೊಕದ್ದಮೆಯನ್ನು ದುರ್ಬಲಗೊಳಿಸಿದೆಯೆಂದು ಅಭಿಪ್ರಾಯಿಸಿದರು.

ಬಾಬರಿ ಮಸೀದಿ ಧ್ವಂಸಕ್ಕೆ ಪಿತೂರಿ ಹಾಗೂ ಇತರ ಆರೋಪಕ್ಕೆ ಒಳಗಾಗಿರುವ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಷಿ ಸೇರಿದಂತೆ ಆರೋಪಿಗಳನ್ನು ಬುಧವಾರ ಖುಲಾಸೆ ಮಾಡಿ ತೀರ್ಪು ನೀಡಿದ ಸಂದರ್ಭ ವಿಶೇಷ ಸಿಬಿಐ ನ್ಯಾಯಾಲಯ ಈ ಅಂಶವನ್ನು ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News