×
Ad

ಮಹಾತ್ಮಾ ಗಾಂಧೀಜಿ ರೈತರ ಬಗ್ಗೆ ಅತ್ಯಂತ ಹೆಚ್ಚಿನ ಸಹಾನುಭೂತಿ ಹೊಂದಿದ್ದರು: ಸೋನಿಯಾ ಗಾಂಧಿ

Update: 2020-10-02 20:34 IST

ಹೊಸದಿಲ್ಲಿ,ಅ.2: ಮಹಾತ್ಮಾ ಗಾಂಧಿಯವರು ರೈತರು,ಕಾರ್ಮಿಕರು ಮತ್ತು ಶ್ರಮಿಕ ವರ್ಗದ ಬಗ್ಗೆ ಅತ್ಯಂತ ಹೆಚ್ಚಿನ ಸಹಾನುಭೂತಿಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ‘ಜೈ ಜವಾನ್ ಜೈ ಕಿಸಾನ್ ’ಘೋಷಣೆಯನ್ನು ದೇಶಕ್ಕೆ ನೀಡಿದ್ದರು ಎಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು,ಕೃಷಿಕ್ಷೇತ್ರದಲ್ಲಿ ಇತ್ತೀಚಿಗೆ ತರಲಾಗಿರುವ ಮೂರು ’ಕರಾಳ ಕಾನೂನು ’ಗಳ ವಿರುದ್ಧ ಪ್ರತಿಭಟನೆಯು ಯಶಸ್ವಿಯಾಗುತ್ತದೆ ಮತ್ತು ರೈತರು ವಿಜಯಶಾಲಿಗಳಾಗುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

 ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ವೀಡಿಯೊ ಸಂದೇಶದಲ್ಲಿ ಅವರಿಗೆ ಗೌರವಗಳನ್ನು ಸಲ್ಲಿಸಿರುವ ಸೋನಿಯಾ,ಭಾರತದ ಆತ್ಮವು ಅದರ ಗ್ರಾಮಗಳು,ಹೊಲಗದ್ದೆಗಳು ಮತ್ತು ಕೊಟ್ಟಿಗೆಗಳಲ್ಲಿದೆ ಎಂದು ಗಾಂಧೀಜಿಯವರು ಹೇಳಿದ್ದರು ಮತ್ತು ಅವರ ಜಯಂತಿ ಸಂದರ್ಭದಲ್ಲಿ ದೇಶದ ರೈತರು ಮತ್ತು ಕೃಷಿ ಕಾರ್ಮಿಕರು ಮೂರು ಕೃಷಿಕ ವಿರೋಧಿ ಕರಾಳ ಕಾನೂನುಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ ಎಂದಿದ್ದಾರೆ.

ಗಾಂಧಿ ಜಯಂತಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ರೈತರ ಪರವಾಗಿ ಮತ್ತು ಕೃಷಿ ಕಾನೂನುಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆ.

ರೈತರು ತಮ್ಮ ಬೆವರು ಸುರಿಸಿ ದೇಶಕ್ಕಾಗಿ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದರಾದರೂ ಮೋದಿ ಸರಕಾರವು ಅವರು ರಕ್ತಕಣ್ಣೀರು ಸುರಿಸುವಂತೆ ಮಾಡಿದೆ ಎಂದ ಅವರು,ಕೊರೋನ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಗತ್ಯವುಳ್ಳ ದೇಶದ ಎಲ್ಲರಿಗೂ ಉಚಿತ ಆಹಾರಧಾನ್ಯಗಳಿಗಾಗಿ ಸರಕಾರವನ್ನು ಆಗ್ರಹಿಸಲಾಗಿತ್ತು. ನಮ್ಮ ರೈತ ಬಾಂಧವರಿಲ್ಲದೆ ಕೋಟ್ಯಂತರ ಜನರಿಗೆ ಎರಡು ಹೊತ್ತಿನ ಊಟ ಒದಗಿಸುವುದು ನಮ್ಮಿಂದ ಸಾಧ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.

ಇಂದು ದೇಶದ ಪ್ರಧಾನಿ ಅನ್ನದಾತ ರೈತರಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ. ರೈತರಿಗಾಗಿ ಕಾನೂನುಗಳನ್ನು ರೂಪಿಸಲಾಗಿದೆ,ಆದರೆ ಇದಕ್ಕಾಗಿ ಅವರೊಂದಿಗೆ ಸಮಾಲೋಚಿಸಿಯೂ ಇಲ್ಲ. ಈ ವಿಷಯದಲ್ಲಿ ಚರ್ಚೆಗಳೂ ನಡೆಯಲಿಲ್ಲ. ಮೂರು ಕರಾಳ ಕಾನೂನುಗಳನ್ನು ರೂಪಿಸುವ ಮುನ್ನ ಸರಕಾರವು ತನ್ನ ಆಯ್ದ ಸ್ನೇಹಿತರೊಂದಿಗೆ ಮಾತುಕತೆ ನಡೆಸಿ ರೈತರ ಹಿತಾಸಕ್ತಿಗಳನ್ನು ಮೂಲೆಗುಂಪು ಮಾಡಿದೆ ಎಂದು ಹೇಳಿರುವ ಸೋನಿಯಾ,ಧಾನ್ಯ ಮಾರುಕಟ್ಟೆಗಳನ್ನು ರದ್ದುಗೊಳಿಸಿದಾಗ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡಲು ಕಾಳಸಂತೆಕೋರರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ ಮತ್ತು ರೈತರ ಭೂಮಿಗಳನ್ನು ಕೃಷಿಗಾಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಕೋಟ್ಯಂತರ ರೈತರನ್ನು ಯಾರು ರಕ್ಷಿಸುತ್ತಾರೆ? ಧಾನ್ಯ ಮಾರುಕಟ್ಟೆಗಳಲ್ಲಿಯ ಸಣ್ಣ ಅಂಗಡಿಕಾರರು ಮತ್ತು ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಅವಸ್ಥೆ ಏನಾಗಲಿದೆ? ಅವರ ಹಕ್ಕುಗಳನ್ನು ರಕ್ಷಿಸುವವರು ಯಾರು? ಮೋದಿ ಸರಕಾರವು ಈ ಬಗ್ಗೆ ಯೋಚಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.

ಭೂ ಸ್ವಾಧೀನದಲ್ಲಿ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಪಾರದರ್ಶಕತೆ,ಪುನರ್ವಸತಿ ಕಾಯ್ದೆಯನ್ನು ಅಧ್ಯಾದೇಶದ ಮೂಲಕ ಬದಲಿಸಲು ತನಗೆ ಸಾಧ್ಯವಾಗಿರಲಿಲ್ಲ ಎನ್ನುವುದನ್ನು ಮೋದಿ ಸರಕಾರವು ಮರೆಯಬಾರದು ಎಂದೂ ಸೋನಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News