ಹತ್ರಸ್‌ಗೆ ತೆರಳಲು ಮಾಧ್ಯಮಗಳು, ರಾಜಕಾರಣಿಗಳಿಗೆ ಅವಕಾಶ ನೀಡಿ: ಉಮಾ ಭಾರತಿ ಒತ್ತಾಯ
Update: 2020-10-02 20:43 IST
ಹೊಸದಿಲ್ಲಿ, ಅ.2: ಹತ್ರಸ್ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಉತ್ತರಪ್ರದೇಶ ಸರಕಾರ ಹಾಗೂ ಪೊಲೀಸರು ನಿರ್ವಹಿಸುತ್ತಿರುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಎಲ್ಲ ಮಾಧ್ಯಮ ಪ್ರತಿನಿಧಿಗಳು ಹಾಗೂ ರಾಜಕಾರಣಿಗಳಿಗೆ ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರುಗಳನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಆದಿತ್ಯನಾಥ್‌ಗೆ ವಿನಂತಿಸಿದ್ದಾರೆ.
ಸಂತ್ರಸ್ತೆಯ ಮೃತದೇಹವನ್ನು ರಾತ್ರೋರಾತ್ರಿ ದಹಿಸಿರುವ ಉತ್ತರಪ್ರದೇಶ ಪೊಲೀಸರ ನಿರ್ಧಾರವನ್ನು ಟೀಕಿಸಿದ ಉಮಾ ಭಾರತಿ,ಹತ್ರಸ್ ಘಟನೆಯಲ್ಲಿ ಪೊಲೀಸರ ಶಂಕಾಸ್ಪದ ಕ್ರಮ ಬಿಜೆಪಿ, ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಯ ಗೌರವವನ್ನು ಕುಗ್ಗಿಸುತ್ತದೆ. ನನಗೆ ಕೊರೋನ ಇಲ್ಲದೇ ಇರುತ್ತಿದ್ದರೆ ಹತ್ರಾಸ್‌ಗೆ ತೆರಳುತ್ತಿದ್ದೆ ಎಂದು ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಕ್ಕೆ ಚಿಕಿತ್ಸೆ ಪಡೆಯುತ್ತಿರುವ ಉಮಾಭಾರತಿ ಹೇಳಿದ್ದಾರೆ.