ಪ್ರತಿಭಟನಾ ರ್ಯಾಲಿ ನಡೆಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್

Update: 2020-10-02 15:26 GMT

ಲಕ್ನೋ, ಅ. 2: ಹತ್ರಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೃಷಿ ಕಾಯ್ದೆ ವಿರುದ್ಧ ಇಲ್ಲಿನ ಹಝ್ರತ್‌ಗಂಜ್ ಪ್ರದೇಶದಲ್ಲಿ ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

 ಪ್ರತಿಭಟನಾ ರ್ಯಾಲಿ ಸಮಾಜವಾದಿ ಪಕ್ಷದ ಕಚೇರಿಯಿಂದ ಆರಂಭವಾಗಿತ್ತು. ನಗರದಲ್ಲಿರುವ ಗಾಂಧಿ ಪ್ರತಿಮೆಯ ಸಮೀಪ ಅಂತ್ಯಗೊಳ್ಳಲಿತ್ತು. ಅನಂತರ ಶಾಸಕರು ಹಾಗೂ ಪಕ್ಷದ ಹಿರಿಯ ನಾಯಕರು ಮೌನ ವೃತ ನಡೆಸಲು ನಿರ್ಧರಿಸಿದ್ದರು.

 ಆದರೆ, ಹಝ್ರತ್‌ಗಂಜ್‌ನ ತಿರುವಿನಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಇರಿಸಿ ಪ್ರತಿಭಟನಾ ರ್ಯಾಲಿ ತಡೆದರು. ಪ್ರತಿಭಟನಾ ರ್ಯಾಲಿ ಮುಂದುವರಿಸಲು ಅವಕಾಶ ನೀಡುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು. ಈ ಸಂದರ್ಭ ಪೊಲೀಸರು ಹಾಗೂ ಸಮಾಜವಾದಿ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

‘‘ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವಾದ ಇಂದು ಸತ್ಯದ ಧ್ವನಿಯನ್ನು ಸರಕಾರ ಹಿಂಸಾತ್ಮಕವಾಗಿ ನಿಗ್ರಹಿಸುತ್ತಿರುವುದರ ವಿರುದ್ಧ ಹಾಗೂ ಹತ್ರಸ್ ನ ಪುತ್ರಿಗಾಗಿ ಮೌನ ವೃತ ಹಾಗೂ ಧರಣಿ ನಡೆಸಲು ಬಯಸಿದ ಪಕ್ಷದ ಶಾಸಕರು ಹಾಗೂ ಹಿರಿಯ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಖಂಡನೀಯ’’ ಎಂದು ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ಹತ್ರಸ್ ನ ಜಿಲ್ಲಾ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News