ಸಾಬರ್‌ಮತಿ ಸೆಂಟ್ರಲ್ ಜೈಲಿನಲ್ಲಿ ಜೈಲು ರೇಡಿಯೋ ಕೇಂದ್ರ ಕಾರ್ಯಾರಂಭ
ಅಹ್ಮದಾಬಾದ್, ಅ.2: ಗಾಂಧಿ ಜಯಂತಿ ಸಂದರ್ಭದಲ್ಲಿ ಸಾಬರ್‌ಮತಿ ಸೆಂಟ್ರಲ್ ಜೈಲಿನಲ್ಲಿ ‘ಜೈಲು ರೇಡಿಯೋ ಕೇಂದ್ರ’ವನ್ನು ಆರಂಭಿಸುವ ಮೂಲಕ ಗಾಂಧೀಜಿಯವರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗಿದೆ. ಗುಜರಾತ್ ಪೊಲೀಸರು ಈ ಉಪಕ್ರಮ ಆರಂಭಿಸಿದ್ದು, ಜೈಲಿನಲ್ಲಿರುವ 3,000ಕ್ಕೂ ಅಧಿಕ ಖೈದಿಗಳಿಗೆ ಮುಡುಪಾಗಿರುವ ಈ ರೇಡಿಯೋ ಕೇಂದ್ರದಲ್ಲಿ ಹಾಡು, ಸಂದರ್ಶನಗಳು, ಮಾಹಿತಿ ಬುಲೆಟಿನ್, ಖೈದಿಗಳು ಕತೆ ಹೇಳುವುದು ಮುಂತಾದ ಪೂರ್ವದಾಖಲಿತ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
ಹೊರಜಗತ್ತಿನ ಸಂಪರ್ಕವಿಲ್ಲದೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಎಷ್ಟೊಂದು ಯಾತನೆಯ ಕ್ರಿಯೆ ಎಂಬುದು ಲಾಕ್‌ಡೌನ್ ಸಂದರ್ಭ ನಮಗೆ ಅರಿವಾಗಿದೆ. ಹೀಗಿರುವಾಗ ಜೈಲಿನಲ್ಲಿ, ಕುಟುಂಬದವರ ಸಂಪರ್ಕವಿಲ್ಲದೆ ವರ್ಷಗಟ್ಟಲೆ ಬಂಧಿಗಳಾಗಿರುವ ಖೈದಿಗಳ ಪರಿಸ್ಥಿತಿ ಹೇಗಿರಬೇಡ. ಸಾಬರ್‌ಮತಿ ಜೈಲಿನಲ್ಲಿ 3,000ಕ್ಕೂ ಅಧಿಕ ಖೈದಿಗಳಿದ್ದು ಪ್ರತಿಯೊಬ್ಬರಿಗೂ ತಮ್ಮದೇ ಆದ ಕತೆಗಳಿವೆ. ತಮ್ಮ ಕತೆಯನ್ನು ಹೇಳಲು, ಜೈಲಿನಲ್ಲಿ ಕಳೆದ ಅವಧಿ ತಮ್ಮಲ್ಲಿ ಯಾವ ಬದಲಾವಣೆ ತಂದಿದೆ, ಬಿಡುಗಡೆ ಹೊಂದಿ ಊರಿಗೆ ತೆರಳಿದ ಬಳಿಕ ಮುಂದೆ ಏನು ಮಾಡಲು ನಿರ್ಧರಿಸಿದ್ದೇವೆ ಎಂದು ಖೈದಿಗಳು ರೇಡಿಯೋ ಮೂಲಕ ಹೇಳಬಹುದು. ಜೊತೆಗೆ, ಹಿಂದಿ ಮತ್ತು ಗುಜರಾತಿ ಹಾಡುಗಳು, ಆರೋಗ್ಯದ ಕುರಿತ ಮಾಹಿತಿ, ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್, ವಿವಿಧ ಕ್ಷೇತ್ರಗಳ ಖ್ಯಾತ ವ್ಯಕ್ತಿಗಳ ಸಂದರ್ಶನ, ಖೈದಿಗಳಿಗೆ ಪ್ರಯೋಜನವಾಗುವ ಸರಕಾರಿ ಯೋಜನೆಗಳ ಕುರಿತ ಮಾಹಿತಿಯನ್ನು ಪ್ರಸಾರ ಮಾಡಲಾಗುವುದು ಎಂದು ಗುಜರಾತ್ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ(ಬಂಧೀಖಾನೆ) ಕೆಎಲ್‌ಎನ್ ರಾವ್ ಹೇಳಿದ್ದಾರೆ.
ಪ್ರತೀದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ, ಮಧ್ಯಾಹ್ನ 3ರಿಂದ 6ರವರೆಗೆ ರೇಡಿಯೋ ಕೇಂದ್ರ ಕಾರ್ಯನಿರ್ವಹಿಸಲಿದೆ. 1851ರಲ್ಲಿ ನಿರ್ಮಿಸಲಾಗಿದ್ದ ಜೈಲಿನಲ್ಲಿ ಮಹಾತ್ಮಾ ಗಾಂಧೀಜಿಯನ್ನು 1922ರ ಮಾರ್ಚ್ 11ರಿಂದ ಮಾರ್ಚ್ 20ರವರೆಗೆ ಬಂಧನದಲ್ಲಿಡಲಾಗಿತ್ತು. ಇದರ ಸ್ಮರಣಾರ್ಥ ಜೈಲಿನ ಒಂದು ಪ್ರಾಂಗಣಕ್ಕೆ ‘ಗಾಂಧಿ ಖೋಲಿ’ ಎಂದೇ ಹೆಸರಿಡಲಾಗಿದೆ.