ಕೃಷಿ ಮಸೂದೆ: ರೈತ ಸಂಘಟನೆಗಳೊಂದಿಗೆ ಮಾತುಕತೆಗೆ ಸಿದ್ಧ; ರಾಜನಾಥ್ ಸಿಂಗ್

Update: 2020-10-02 17:23 GMT

 ಹೊಸದಿಲ್ಲಿ, ಅ.2: ಮೂರು ಹೊಸ ಕೃಷಿ ಮಸೂದೆಗಳ ಕುರಿತು ರೈತರಲ್ಲಿರುವ ಆತಂಕ ಮತ್ತು ಭೀತಿಯನ್ನು ದೂರಮಾಡುವ ನಿಟ್ಟಿನಲ್ಲಿ ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಮುಕ್ತ ಮನಸ್ಸಿನಿಂದ ಸಿದ್ಧವಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 ನಮ್ಮೊಂದಿಗೆ ಮಾತುಕತೆಗೆ ಬನ್ನಿ, ನಿಮ್ಮ ಯಾವುದೇ ಸಮಸ್ಯೆ, ಆತಂಕಗಳನ್ನು ನಿವಾರಿಸಿಕೊಳ್ಳಿ ಎಂದು ರೈತರ ಸಂಘಟನೆಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ಈಗಾಗಲೇ ಇಂತಹ ಸಭೆಗಳನ್ನು ಆರಂಭಿಸಿದ್ದೇವೆ. ರೈತರ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಕಾರ್ಯವನ್ನು ಮೋದಿ ಸರಕಾರ ಮಾಡುವುದಿಲ್ಲ ಎಂದು ಓರ್ವ ರೈತರ ಮಗನಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ . ಕನಿಷ್ಠ ಬೆಂಬಲ ಬೆಲೆ ಈ ಹಿಂದಿನಂತೆಯೇ ಮುಂದುವರಿಯುವುದಲ್ಲದೆ, ಮುಂದಿನ ದಿನಗಳಲ್ಲಿ ನಿರಂತರ ಹೆಚ್ಚಳವಾಗಲಿದೆ. ಯಾವ ಸಂದರ್ಭದಲ್ಲೂ ಅದು ರದ್ದುಗೊಳ್ಳದು ಎಂದು ಸಿಂಗ್ ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಯ ವಿಷಯದಲ್ಲಿ ಪ್ರತಿಪಕ್ಷಗಳು ಜನರಲ್ಲಿ ತಪ್ಪು ಮಾಹಿತಿ ಮೂಡಿಸುತ್ತಿವೆ. ಹೊಸ ಮಸೂದೆಯು ರೈತರಿಗೆ ತಮ್ಮ ಉತ್ಪನ್ನಗಳ ಮಾರಾಟ ಸಂದರ್ಭ ಹೆಚ್ಚಿನ ಆಯ್ಕೆ ನೀಡುತ್ತದೆ. ಅಲ್ಲದೆ, ಈ ಹಿಂದೆ ಕೆಲ ಸಂದರ್ಭದಲ್ಲಿ ಪಾವತಿ ಮಾಡುತ್ತಿದ್ದ ರೀತಿ ತೆರಿಗೆಯನ್ನೂ ಪಾವತಿಸಬೇಕಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಪ್ರತಿಭಟನೆಯ ನೆಪದಲ್ಲಿ ಟ್ರ್ಯಾಕ್ಟರ್ ಸುಟ್ಟುಹಾಕಿರುವುದನ್ನು ಖಂಡಿಸಿದ ಅವರು, ಯೋಧರಿಗೆ ಆಯುಧ ಎಷ್ಟು ಪವಿತ್ರವೋ, ರೈತರಿಗೆ ಟ್ರ್ಯಾಕ್ಟರ್ ಅಷ್ಟೇ ಪವಿತ್ರವಾಗಿದೆ. ಅದನ್ನು ಸುಟ್ಟುಹಾಕುವುದು ರೈತರಿಗೆ ಮಾಡಿದ ಅವಮಾನವಾಗಿದೆ. ಈ ಕೃತ್ಯವನ್ನು ರಾಜಕೀಯ ಪಕ್ಷವೊಂದು ತನ್ನ ಸ್ವಹಿತಾಸಕ್ತಿಗಾಗಿ ನಡೆಸಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News