×
Ad

ಜಾಹೀರಾತುಗಳ ಹಕ್ಕು ನಿರಾಕರಣೆಗಳನ್ನು ಓದುವುದು, ನೋಡುವುದು ಕಷ್ಟ

Update: 2020-10-02 23:13 IST

ಹೊಸದಿಲ್ಲಿ,ಅ.2: ಮುದ್ರಣ,ಟಿವಿ,ರೇಡಿಯೊ ಮತ್ತು ಡಿಜಿಟಲ್ ಜಾಹೀರಾತುಗಳಲ್ಲಿಯ ಡಿಸ್‌ಕ್ಲೇಮರ್‌ಗಳು ಅಥವಾ ಹಕ್ಕು ನಿರಾಕರಣೆ ಹೇಳಿಕೆಗಳನ್ನು ಓದಲು,ವೀಕ್ಷಿಸಲು ಅಥವಾ ಆಲಿಸಲು ಕಷ್ಟವಾಗುತ್ತದೆ ಎಂದು ಶೇ.87ರಷ್ಟು ಭಾರತೀಯ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಲೋಕಲ್‌ಸರ್ಕಲ್ಸ್ ನಡೆಸಿದ ಸಮೀಕ್ಷೆಯ ವರದಿಯು ತಿಳಿಸಿದೆ.

ಶುಕ್ರವಾರ ಈ ವರದಿ ಬಿಡುಗಡೆಗೊಂಡಿದೆ. ದೇಶಾದ್ಯಂತ 320 ಜಿಲ್ಲೆಗಳ 1,15,000 ಬಳಕೆದಾರರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಜಾಹೀರಾತುಗಳಿಗಾಗಿ ಬಿಡುಗಡೆಗೊಳಿಸಿರುವ ಕರಡು ಮಾರ್ಗಸೂಚಿಯಂತೆ ಅಸ್ಪಷ್ಟ ಹಕ್ಕು ನಿರಾಕರಣೆಗಳನ್ನು ಬಳಕೆದಾರರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನಾಗಿ ಪರಿಗಣಿಸಲಾಗುತ್ತದೆ.

 ಹಕ್ಕು ನಿರಾಕರಣೆ ಹೇಳಿಕೆಗಳು ಜಾಹೀರಾತಿನಲ್ಲಿಯ ವಿಷಯದ ಭಾಷೆಯಲ್ಲಿ ಮತ್ತು ಅದೇ ಗಾತ್ರದ ಅಕ್ಷರಗಳಲ್ಲಿಯೇ ಇರಬೇಕು ಹಾಗೂ ಅವು ಜಾಹೀರಾತುಗಳ ಪ್ರಧಾನ ಮತ್ತು ಎದ್ದು ಕಾಣಿಸುವ ಜಾಗದಲ್ಲಿರಬೇಕು ಎಂದೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.71ರಷ್ಟು ಪುರುಷರು ಮತ್ತು ಶೇ.29ರಷ್ಟು ಮಹಿಳೆಯರಾಗಿದ್ದರು. ಸಮೀಕ್ಷೆಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗಿತ್ತು.

ಶೇ.86ರಷ್ಟು ಜನರು ಮಕ್ಕಳಿಗೆ ಸೂಕ್ತವಲ್ಲ ಎಂದು ಹೇಳಿದ್ದಾರೆ.

ಶೇ.73ರಷ್ಟು ಜನರು ಆಮಿಷಗಳನ್ನೊಡ್ಡುವ ಜಾಹಿರಾತುಗಳ ಬಗ್ಗೆ ದೂರಿದ್ದಾರೆ.

 ಕಳೆದೊಂದು ವರ್ಷದಲ್ಲಿ ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವ ಅಥವಾ ದೊಡ್ಡ ವ್ಯಾಪಾರದ ಭಾಗವಾಗಿ ಕೊಡುಗೆಗಳನ್ನು ತಾವು ಗಮನಿಸಿದ್ದೇವೆ. ಆದರೆ ಸ್ಟೋರ್,ಆ್ಯಪ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ವಸ್ತು ಆ ಬೆಲೆಯಲ್ಲಿ ಲಭ್ಯವಿರುವುದಿಲ್ಲ ಎಂದು ಇವರಲ್ಲಿ ಶೇ.47ರಷ್ಟು ಜನರು ಹೇಳಿದರೆ,ಜಾಹೀರಾತಿನಲ್ಲಿಯ ಬೆಲೆಗೆ ಉತ್ಪನ್ನವು ಲಭ್ಯವಿರುತ್ತದಾದರೂ ಹೆಚ್ಚುವರಿ ಷರತ್ತುಗಳನ್ನು ವಿಧಿಸಲಾಗುತ್ತದೆ ಎಂದು ಶೇ.26ರಷ್ಟು ಜನರು ತಿಳಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಆ್ಯಪ್‌ಗಳು,ಗೇಮ್‌ಗಳು,ಇತರ ಆನ್‌ಲೈನ್ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಮಕ್ಕಳನ್ನು ದುಂದುವೆಚ್ಚಕ್ಕೆ ಪ್ರಚೋದಿಸುವ ಜಾಹೀರಾತುಗಳನ್ನು ತಾವು ಗಮನಿಸಿದ್ದಾಗಿ ಶೇ.75ರಷ್ಟು ಜನರು ಹೇಳಿದ್ದಾರೆ.

ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ವೆಬ್‌ಸೈಟ್‌ಗಳಿಂದ ಜಾಹೀರಾತುಗಳನ್ನು ಸರಕಾರವು ನಿಷೇಧಿಸಬೇಕೆಂದು ಶೇ.77ರಷ್ಟು ಜನರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News