‘ಮೇಲ್ತೆನೆ’ಯಿಂದ ಬ್ಯಾರಿ ಭಾಷಾ ದಿನಾಚರಣೆ

Update: 2020-10-03 05:41 GMT

ಮಂಗಳೂರು, ಅ. 3: ಬ್ಯಾರಿ ಲೇಖಕರು-ಕಲಾವಿದರ ಕೂಟ (ಮೇಲ್ತೆನೆ)ದ ವತಿಯಿಂದ ದೇರಳಕಟ್ಟೆಯ ನಾಟೆಕಲ್ ಸಮೀಪದ ವಿಜಯನಗರ ಬಳಿಯ ಮೈದಾನದಲ್ಲಿ ಬ್ಯಾರಿ ಭಾಷಾ ದಿನಾಚರಣೆಯು ಶನಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಳ್ಳಾಲ ಅಳೇಕಲ‌ ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ಮೇಲ್ತೆನೆಯ ಅಧ್ಯಕ್ಷ ಇಸ್ಮಾಯಿಲ್ ಟಿ.‌ ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಉಳಿವಿಗಾಗಿ ದೊಡ್ಡ ಆಂದೋಲನ ನಡೆದುದರ ಫಲವಾಗಿ‌ ಬ್ಯಾರಿ ಭಾಷೆಯ ಹಿರಿಮೆ ಹೆಚ್ಚಿದೆ. ನಾಡಿನಾದ್ಯಂತ ಈ ದಿನ ಬ್ಯಾರಿ ಸಮುದಾಯವು ಬ್ಯಾರಿ ಭಾಷಾ ದಿನವನ್ನು ಆಚರಿಸಲಾಗುತ್ತಿದೆ.‌ ನಮಗಿಂದು ಹರ್ಷ, ಸಂಭ್ರಮ‌ದ ದಿನವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಲ್ತೆನೆಯ ಸದಸ್ಯ ಹಂಝ ಮಲಾರ್ ಉದ್ಯೋಗ, ವ್ಯಾಪಾರದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ ಬ್ಯಾರಿ ಪ್ರಮುಖರು 1997ರಲ್ಲಿ ಬೆಂಗಳೂರಿನಲ್ಲಿ‌ ಬ್ಯಾರಿ ಸಮ್ನೇಳನ ಆಯೋಜಿಸಿ ಬ್ಯಾರಿ ಅಕಾಡಮಿಯ ಕೂಗೆಬ್ಬಿಸಿದರು. ಆ ಬಳಿಕ ಮಂಗಳೂರು, ಬಂಟ್ವಾಳ, ಉಡುಪಿಯಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲೂ ಅಕಾಡಮಿಗಾಗಿ ಒತ್ತಾಯಿಸಲಾಯಿತು. ನಿರಂತರ‌  10  ವರ್ಷದ ಪ್ರಯತ್ನದ ಫಲವಾಗಿ 2007ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಬ್ಯಾರಿ ಸಾಹಿತ್ಯ ‌ಅಕಾಡಮಿಯನ್ನು‌ ಘೋಷಿಸಲಾಯಿತು.

2007ರ‌ ಅಕ್ಟೋಬರ್ 3ರಂದು ಸರಕಾರ‌ ಅಧಿಕೃತವಾಗಿ ‌ಆದೇಶ ಹೊರಡಿಸಿತು. ಅದರ ನೆನಪಿಗಾಗಿ 2013ರಿಂದ ಅಕ್ಟೋಬರ್ 3ನೆ ದಿನದಂದು ಬ್ಯಾರಿ ಭಾಷಾ ದಿನವನ್ನಾಗಿ ನಿರಂತರವಾಗಿ‌ ಆಚರಿಸಲಾಗುತ್ತಿದೆ ಎಂದರು.‌ ಮೇಲ್ತೆನೆಯ ಗೌರವಾಧ್ಯಕ್ಷ ಅಲಿಕುಂಞಿ ಪಾರೆ ಮಾತನಾಡಿ ಬ್ಯಾರಿ ಅಕಾಡಮಿಯು ಕಂಡು ಹಿಡಿದ ಹೊಸ ಬ್ಯಾರಿ ಲಿಪಿಯ ಪ್ರಯತ್ನ ಶ್ಲಾಘನೀಯ. ಈಗ ಇದಕ್ಕೆ ಟೀಕೆ ವ್ಯಕ್ತವಾದರೂ ಕೂಡ ಮುಂದೊಂದು ದಿನ ಇದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಮೇಲ್ತೆನೆಯ ಸದಸ್ಯರಾದ, ಬಶೀರ್ ಅಹ್ಮದ್ ಕಿನ್ಯ, ರಿಯಾಝ್ ಮಂಗಳೂರು, ಆಸೀಫ್ ಬಬ್ಬುಕಟ್ಟೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್ ಸ್ವಾಗತಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News