ಪಂಜಾಬ್: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕಾರಕ್ಕೆ 13,000ಕ್ಕೂ ಅಧಿಕ ಗ್ರಾ.ಪಂ.ಗಳು ಸಜ್ಜು

Update: 2020-10-03 15:56 GMT
ಫೈಲ್ ಚಿತ್ರ

ಮೊಹಾಲಿ,ಅ.3: ಪಂಜಾಬಿನಲ್ಲಿ 13,000ಕ್ಕೂ ಅಧಿಕ ಗ್ರಾಮ ಪಂಚಾಯತ್‌ಗಳಿವೆ. ಕೇಂದ್ರವು ಹೊಸದಾಗಿ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆಯೇ ರಾಜ್ಯದ ಹೆಚ್ಚುಕಡಿಮೆ ಎಲ್ಲ ಗ್ರಾಮ ಪಂಚಾಯತ್‌ಗಳು ಈ ಕಾಯ್ದೆಗಳ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿ ತಮ್ಮ ವಿರೋಧವನ್ನು ದಾಖಲಿಸಲು ಸಜ್ಜಾಗಿವೆ. ಇದು ದೇಶದ ಬೃಹತ್ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ಪ್ರಕ್ರಿಯೆಗಳಲ್ಲಿ ಒಂದಾಗಲಿದೆ.

ಈಗಾಗಲೇ ಮೂರು ಡಝನ್‌ಗೂ ಅಧಿಕ ಪಂಚಾಯತ್‌ಗಳು ಇಂತಹ ನಿರ್ಣಯಗಳನ್ನು ಅಂಗೀಕರಿಸಿದ್ದು,ಮುಂಬರುವ ದಿನಗಳಲ್ಲಿ ಇನ್ನಷ್ಟು ಗ್ರಾಮ ಪಂಚಾಯತ್‌ಗಳು ಈ ಗುಂಪಿಗೆ ಸೇರಲಿವೆ.

 1994ರ ಪಂಜಾಬ್ ಪಂಚಾಯತ್ ರಾಜ್ ಕಾಯ್ದೆಯಂತೆ ಸ್ವಯಂ ಆಡಳಿತದ ಗ್ರಾಮ ಪಂಚಾಯತ್‌ಗಳು ಏಳು ದಿನಗಳ ಪೂರ್ವಭಾವಿ ನೋಟಿಸ್ ನೀಡಿದ ಬಳಿಕ ವಿಶೇಷ ಸಭೆಯನ್ನು ಸೇರಬಹುದು ಮತ್ತು ನಿರ್ಣಯವನ್ನು ಅಂಗೀಕರಿಸಬಹುದಾಗಿದೆ.

ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದ ಬಳಿಕ ಗ್ರಾಮ ಪಂಚಾಯತ್‌ಗಳು ಅವುಗಳನ್ನು ಸರಕಾರದ ಆಡಳಿತಾತ್ಮಕ ಮಾರ್ಗಗಳ ಮೂಲಕ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ರವಾನಿಸಲಿವೆ.

ಇದು ನಾಗರಿಕ ಅವಿಧೇಯತೆಯ ಕೃತ್ಯವಾಗಿದೆ ಮತ್ತು ಇಂತಹ ಅವಿಧೇಯತೆಯು ಪ್ರಜಾಸತ್ತಾತ್ಮಕವಾಗಿದೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಡಾ.ದರ್ಶನ ಪಾಲ್ ಹೇಳಿದರು. ಗ್ರಾಮಸಭೆಗಳಿಗೆ ಕಾನೂನನ್ನು ತಿರಸ್ಕರಿಸುವ ಹಕ್ಕು ಇದೆ ಮತ್ತು ಸ್ವಯಂ ಆಡಳಿತ ಸಂಸ್ಥೆಯಾಗಿ ಅವು ಈ ಹಕ್ಕನ್ನು ಚಲಾಯಿಸುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News