ಚುನಾವಣಾ ಆಯೋಗದಿಂದ ಅಂಚೆ ಮತದಾನ ಪ್ರಕ್ರಿಯೆ ಪರಿಷ್ಕರಣೆ
ಹೊಸದಿಲ್ಲಿ, ಅ. 4: ಎಂಬತ್ತು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಹೆಚ್ಚು ಅನುಕೂಲಕರವಾಗಲು ಅಂಚೆ ಮತದಾನದ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಪರಿಷ್ಕರಿಸಿದೆ.
ಬೂತ್ ಮಟ್ಟದ ಅಧಿಕಾರಿ ಅಂಚೆ ಮತದಾನ ಆಯ್ಕೆ ಮಾಡಲು ತನ್ನ ಮತಗಟ್ಟೆಯ ವ್ಯಾಪ್ತಿಯಲ್ಲಿ ಬರುವ 80 ವರ್ಷದಿಂದ ಮೇಲ್ಪಟ್ಟ ಹಾಗೂ ಅಂಗವಿಕಲರ ಮನೆಗೆ ಅಗತ್ಯವಾದ ಫಾರ್ಮ್ ಅನ್ನು ಪೂರೈಸಲಿದ್ದಾರೆ. ‘‘ಒಂದೇ ವೇಳೆ ಆತ ಅಥವಾ ಆಕೆ ಅಂಚೆ ಮತದಾನ ಆಯ್ಕೆ ಮಾಡಿದರೆ, ಅಧಿಸೂಚನೆ ಹೊರಡಿಸಿದ ಐದು ದಿನಗಳ ಒಳಗೆ ಬೂತ್ ಮಟ್ಟದ ಅಧಿಕಾರಿಗಳು ಭರ್ತಿ ಮಾಡಲಾದ 12-ಡಿ ಅರ್ಜಿಯನ್ನು ಅವರಿಂದ ಸಂಗ್ರಹಿಸಲಿದ್ದಾರೆ ಹಾಗೂ ಚುನಾವಣಾ ಅಧಿಕಾರಿಗೆ ನೀಡಲಿದ್ದಾರೆ’’ ಎಂದು ಚುನಾವಣಾ ಆಯೋಗ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕಳುಹಿಸಿದ ಅಕ್ಟೋಬರ್ 3ರ ಪತ್ರದಲ್ಲಿ ಹೇಳಿದೆ. ಚುನಾವಣೆ ಎದುರಿಸಲಿರುವ ಬಿಹಾರ್‌ಗೆ ಕಳೆದ ವಾರ ಭೇಟಿ ನೀಡಿದ ಸಂದರ್ಭ ಮಾಧ್ಯಮ ಹಾಗೂ ನಾಗರಿಕ ಸಮಾಜದಿಂದ ಚುನಾವಣಾ ಘಟಕ ಸ್ವೀಕರಿಸಿದ ಸಲಹೆಯ ಆಧಾರದಲ್ಲಿ ಈ ಸೂಚನೆಗಳನ್ನು ನೀಡಲಾಗಿದೆ.
ಹೊಸ ಸೂಚನೆಗಳು ಕಳೆದ ವಾರ ಪ್ರಕಟಿಸಲಾದ 56 ವಿಧಾನ ಸಭೆ ಸ್ಥಾನ ಹಾಗೂ 1 ಲೋಕಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳು ಹಾಗೂ ಉಪ ಚುನಾವಣೆಗಳಿಗೆ ಅನ್ವಯವಾಗಲಿವೆ. ಸೂಚನೆಯಂತೆ ಚುನಾವಣಾ ಅಧಿಕಾರಿ ಮತದಾನದ ತಂಡವನ್ನು ನಿಯೋಜಿಸಲಿದೆ. ಈ ತಂಡ ಸೂಚಿಸಿದ ದಿನಾಂಕದ ಒಳಗೆ ಅಂಚೆ ಮತ ಪತ್ರವನ್ನು ಪೂರೈಸಿ ಸಂಗ್ರಹಿಸಲಿದೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲಿದೆ.