×
Ad

ಗುಜರಾತಿನಲ್ಲಿ ಉಪ್ಪಿನ ಉತ್ಪಾದನೆ ಕುಂಠಿತ: ಮುಂದಿನ ವರ್ಷ ಕೊರತೆಯ ಸಾಧ್ಯತೆ

Update: 2020-10-04 23:58 IST

ಅಹ್ಮದಾಬಾದ್,ಅ.4: ಕಳೆದ ಎರಡು ವರ್ಷಗಳಲ್ಲಿ ಅತಿಯಾಗಿ ಸುರಿದ ಮಳೆ ಮತ್ತು ಕೋವಿಡ್ ಲಾಕ್‌ಡೌನ್‌ನಿಂದಾಗಿ ಗುಜರಾತಿನಲ್ಲಿ ಉಪ್ಪಿನ ಉತ್ಪಾದನೆ ಕುಂಠಿತಗೊಂಡಿದ್ದು,ಮುಂದಿನ ವರ್ಷ ಭಾರತೀಯ ಮಾರುಕಟ್ಟೆಗಳಲ್ಲಿ ಉಪ್ಪಿನ ಕೊರತೆಯುಂಟಾಗುವ ಸಾಧ್ಯತೆಯಿದೆ. ಗುಜರಾತ್ ಭಾರತದಲ್ಲಿ ಅತ್ಯಂತ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯವಾಗಿದೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಉಪ್ಪು ಉತ್ಪಾದಿಸುವ ಸ್ಥಳಗಳಲ್ಲಿ ಗುಜರಾತ್ ಸೇರಿದೆ.

2018-19ನೇ ಸಾಲಿನಲ್ಲಿ ಭಾರತವು 300 ಲಕ್ಷ ಟನ್ ಉಪ್ಪಿನ ಬಂಪರ್ ಉತ್ಪಾದನೆಯನ್ನು ಸಾಧಿಸಿತ್ತು. ಈ ಪೈಕಿ ಗುಜರಾತವೊಂದೇ 260 ಲ.ಟ.ಉಪ್ಪನ್ನು ಉತ್ಪಾದಿಸಿತ್ತು.

ಸಾಮಾನ್ಯವಾಗಿ ಮಳೆಯ ಬಳಿಕ ಸೆಪ್ಟೆಂಬರ್‌ನಲ್ಲಿ ಉಪ್ಪಿನ ಉತ್ಪಾದನೆ ಆರಂಭಗೊಳ್ಳುತ್ತದೆ ಮತ್ತು ಜೂನ್-ಜುಲೈನಲ್ಲಿ ಮುಂದಿನ ಮಳೆಗಾಲದವರೆಗೂ ಮುಂದುವರಿಯುತ್ತದೆ. ಆದರೆ 2019ರಲ್ಲಿ ಭಾರೀ ಮಳೆ ನವಂಬರ್‌ವರೆಗೂ ಸುರಿದಿದ್ದು, ಡಿಸೆಂಬರ್-ಜನವರಿಯಲ್ಲಷ್ಟೇ ಉತ್ಪಾದನೆ ಆರಂಭಗೊಂಡಿತ್ತು. ನಂತರ ಕೋವಿಡ್ ಲಾಕ್‌ಡೌನ್‌ನಿಂದಾಗಿ ಉಪ್ಪಿನ ಉತ್ಪಾದನೆ ನಿಗದಿತ ಸಮಯಕ್ಕಿಂತ ಮೊದಲೇ ಸ್ಥಗಿತಗೊಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉಪ್ಪಿನ ಉತ್ಪಾದನೆಯ ಪ್ರಮಾಣ ಶೇ.35ರಷ್ಟು ಕುಸಿದಿದೆ ಎಂದು ಭಾರತೀಯ ಉಪ್ಪು ತಯಾರಕರ ಸಂಘದ ಅಧ್ಯಕ್ಷ ಬಿ.ಸಿ.ರಾವಲ್ ತಿಳಿಸಿದರು.

ಭಾರತವು ವಿಶ್ವದಲ್ಲಿ ಮೂರನೇ ಬೃಹತ್ ಉಪ್ಪು ತಯಾರಿಕೆ ದೇಶವಾಗಿದೆ. ಗುಜರಾತ್ ಅಲ್ಲದೆ ತಮಿಳುನಾಡು,ರಾಜಸ್ಥಾನ,ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳೂ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಉತ್ಪಾದಿಸುತ್ತವೆ.

  ಭಾರತದಲ್ಲಿ ಗೃಹಬಳಕೆಗಾಗಿ ವಾರ್ಷಿಕ ಸುಮಾರು 90 ಲಕ್ಷ ಟನ್ ಉಪ್ಪು ಅಗತ್ಯವಾಗಿದ್ದು,ಅಷ್ಟೇ ಪ್ರಮಾಣದ ಉಪ್ಪು ಕೈಗಾರಿಕೆಗಳಲ್ಲಿ ಬಳಕೆಯಾಗುತ್ತಿದೆ. 50 ಲಕ್ಷ ಟನ್ ಉಪ್ಪು ರಫ್ತಾಗುತ್ತಿದ್ದು,ಬೇಡಿಕೆಯನ್ನು ಅವಲಂಬಿಸಿ ಹೆಚ್ಚುವರಿ 30-40 ಟನ್ ಉಪ್ಪು ವಿದೇಶಗಳಿಗೆ ರವಾನೆಯಾಗುತ್ತದೆ ಎಂದು ರಾವಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News