ಆದಿತ್ಯನಾಥ್ ಸರಕಾರಕ್ಕೆ ಚ್ಯುತಿ ತರಲು ‘ಅಂತರ್ ರಾಷ್ಟ್ರೀಯ ಷಡ್ಯಂತ್ರ’: ಪೊಲೀಸರಿಂದ ಎಫ್‌ಐಆರ್

Update: 2020-10-05 11:45 GMT

ಲಕ್ನೋ: ಹತ್ರಸ್‌ನ 19 ವರ್ಷ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹಲ್ಲೆ ಪ್ರಕರಣದ ಹಿಂದೆ ರಾಜ್ಯದಲ್ಲಿ ಜಾತಿ ಸಂಘರ್ಷವನ್ನು ಪ್ರಚೋದಿಸುವ ಹಾಗೂ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಚ್ಯುತಿ ತರುವ ಅಂತರ್ ರಾಷ್ಟ್ರೀಯ ಷಡ್ಯಂತ್ರ’ವನ್ನು ಬಯಲುಗೊಳಿಸಿರುವುದಾಗಿ ಹೇಳಿರುವ ಉತ್ತರ ಪ್ರದೇಶ ಪೊಲೀಸರು, ರವಿವಾರ ಹತ್ರಸ್‌ನ ಚಂದ್ಪಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ಕಠಿಣ ಸೆಕ್ಷನ್‌ಗಳನ್ವಯ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರನ್ನು ತಪ್ಪಿಸಿ ಸುರಕ್ಷಿತವಾಗಿ ಪ್ರತಿಭಟನೆ ಹೇಗೆ ನಡೆಸಬಹುದೆಂಬುದರ ಕುರಿತು ಮಾಹಿತಿಯಿದ್ದ justiceforhathrasvictim.carrd.co ಎಂಬ ವೆಬ್‌ಸೈಟ್‌ಗೂ ಈ ಷಡ್ಯಂತ್ರಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ವೆಬ್ ಸೈಟ್ ತೆಗೆದು ಹಾಕಲಾಗಿದೆ. ಈ ವೆಬ್ ಸೈಟ್‌ನಲ್ಲಿದ್ದ ಹೆಚ್ಚಿನ ವಿಚಾರಗಳು ಅಮೆರಿಕಾದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್‌ ಪ್ರತಿಭಟನಾಕಾರರು ಆನ್ಲೈನ್ ಶೇರ್ ಮಾಡಿದ್ದ ವಿಚಾರಗಳೇ ಇದ್ದವು ಎನ್ನಲಾಗಿದೆ.

ಎಫ್‌ಐಆರ್ ದಾಖಲಾಗಿರುವುದನ್ನು ದೃಢಪಡಿಸಿದ ಚಂದ್ಪಾ ಪೊಲೀಸ್ ಠಾಣಾಧಿಕಾರಿ ಈ ವಿಚಾರ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಸೆಕ್ಷನ್ 109, ಸೆಕ್ಷನ್ 120ಬಿ, ಸೆಕ್ಷನ್ 124ಎ, 153ಎ, 153ಬಿ ಅಡಿಯಲ್ಲಿ ಹಾಗೂ ಐಟಿ ಕಾಯಿದೆಯ ಕೆಲ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿಯಿದೆ.

ತಮ್ಮ ಸರಕಾರದ ವಿರುದ್ಧದ ‘ಷಡ್ಯಂತ್ರಗಳ’ ಕುರಿತಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಕಾರ್ಯಕರ್ತರನ್ನು ಎಚ್ಚರಿಸಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಜಾತಿ ಮತ್ತು ಕೋಮು ಸಂಘರ್ಷವನ್ನು ಪ್ರಚೋದಿಸಲು ಯತ್ನಿಸುವುವವರನ್ನು ಬಯಲುಗೊಳಿಸುವಂತೆ ಕರೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News