ಪೊಲೀಸರ ಎದುರಲ್ಲೇ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ಗೆ ಬೆದರಿಕೆ ಒಡ್ಡುತ್ತಿರುವ ವೀಡಿಯೊ ವೈರಲ್
ಹತ್ರಸ್/ಹೊಸದಿಲ್ಲಿ, ಅ.5: ದಲಿತ ಯುವತಿಯ ಅತ್ಯಾಚಾರ ಹಾಗೂ ಭೀಕರ ಹಲ್ಲೆ ನಡೆಸಿ ಹತ್ಯೆಗೈದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಾಲ್ವರು ಆರೋಪಿಗಳ ಪರವಾಗಿ ಉತ್ತರಪ್ರದೇಶದ ಹತ್ರಸ್ ನ ಗ್ರಾಮದಲ್ಲಿ ಸಭೆ ನಡೆಸಿರುವ ಮೇಲ್ವರ್ಗದ ಜನರು ರವಿವಾರ ಹತ್ರಸ್ ಗೆ ಭೇಟಿ ನೀಡಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ವಿರುದ್ಧ ಪೊಲೀಸರ ಸಮ್ಮುಖದಲ್ಲೇ ಬಹಿರಂಗ ಬೆದರಿಕೆ ಒಡ್ಡಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಅಗಿದೆ.
ನಾಲ್ವರು ಬಂಧಿತ ಆರೋಪಿಗಳ ಪರವಾಗಿ ಸಭೆ ನಡೆಸಿರುವ ರಾಷ್ಟ್ರೀಯ ಮೇಲ್ಜಾತಿಗಳ ಪರಿಷತ್ ನ ಸದಸ್ಯರು, ನಾಲ್ವರ ವಿರುದ್ಧ ಸಂತ್ರಸ್ತ ಯುವತಿಯ ಕುಟುಂಬ ತಪ್ಪು ಆರೋಪ ಹೊರಿಸಿದೆ ಎಂದು ದೂರಿದ್ದಲ್ಲದೆ, ಸಿಬಿಐ ತನಿಖೆಗೆ ಶಿಫಾರಸು ಮಾಡಿರುವ ಆದಿತ್ಯನಾಥ ಸರಕಾರವನ್ನು ಬೆಂಬಲಿಸಿದೆ, ಸಿಬಿಐ ತನಿಖೆ ವಿರೋಧಿಸಿದ್ದ ಆಝಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬ ಬಹಿರಂಗ ಬೆದರಿಕೆ ಹಾಕಿದ್ದಾನೆ.
"ಸಿಬಿಐ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಅವರು(ಚಂದ್ರಶೇಖರ ಆಝಾದ್) ಸಿಬಿಐ ನಂಬುವುದಿಲ್ಲ. ರಾಜಕೀಯ ಮಾಡಲು ಇಲ್ಲಿಗೆ ಬಂದಿದ್ದಾರೆ. ಕೇವಲ ಒಂದು ಬಾರಿ ಆತನನ್ನು ಭೇಟಿಯಾಗಲು ಅವಕಾಶ ಕೊಡಿ. ಆತನಿಗೆ ನಾವು ಸಿಬಿಐ ಮೇಲೆ ನಂಬಿಕೆ ಬರುವಂತೆ ಮಾಡುತ್ತೇವೆ'' ಎಂದು ಗಟ್ಟಿ ದನಿಯಲ್ಲಿ ವ್ಯಕ್ತಿಯೊಬ್ಬ ಹೇಳುತ್ತಿರುವುದು ವೀಡಿಯೊದಲ್ಲಿದೆ.
ಭೀಮ್ ಸೇನೆಯ ಮುಖಂಡರ ಹತ್ರಸ್ ಭೇಟಿಯ ನಂತರ ಯು.ಪಿ. ಪೊಲೀಸರು ಆಝಾದ್ ಹಾಗೂ ಇತರ 400 ಜನರ ವಿರುದ್ಧ ಹೆಚ್ಚು ಜನ ಸೇರಬಾರದೆಂಬ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಅತ್ಯಾಚಾರಿಗಳ ಆರೋಪಿಗಳನ್ನು ಬೆಂಬಲಿಸಿ 500ಕ್ಕೂ ಅಧಿಕ ಜನರು ಒಂದೆಡೆ ಜಮಾಯಿಸಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.