ಹೈದರಾಬಾದ್: ಬಿಹಾರದ 20 ಬಾಲ ಕಾರ್ಮಿಕರ ರಕ್ಷಣೆ, ಐವರ ಬಂಧನ
Update: 2020-10-05 20:35 IST
ಹೈದರಾಬಾದ್, ಅ.5: ಇಲ್ಲಿಗೆ ಸಮೀಪದ ಬಳೆ ತಯಾರಿಕ ಘಟಕಗಳಲ್ಲಿ ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದ ಬಿಹಾರದ 20 ಮಕ್ಕಳನ್ನು ರಕ್ಷಿಸಲಾಗಿದೆ. ಮಕ್ಕಳ ಕಳ್ಳ ಸಾಗಣೆಯ ಆರೋಪದ ಮೇಲೆ ಐದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರಕ್ಷಿಸಿದ ಮಕ್ಕಳನ್ನು ಪುನರ್ವಸತಿಗಾಗಿ ಇರುವ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಹಾಗೂ ಸರಕಾರಿ ಇಲಾಖೆಗಳ ಅಧಿಕಾರಿಗಳು ಉಪ ನಗರ ಬಾಲಾಪುರದ ಮೂರು ಸಂಕೀರ್ಣಗಳ ಮೇಲೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಬಾಲ ಕಾರ್ಮಿಕರನ್ನು ಅವರ ಆರ್ಥಿಕ ದುಸ್ಥಿತಿಯ ಲಾಭವನ್ನು ಪಡೆದುಕೊಂಡು ಪೋಷಕರಿಗೆ ಅಲ್ಪ ಮೊತ್ತವನ್ನು ಪಾವತಿಸಿದ ನಂತರ ಆರೋಪಿಗಳು ಮಕ್ಕಳನ್ನು ಇಲ್ಲಿಗೆ ಕರೆ ತಂದಿದ್ದರು. ಮಕ್ಕಳಿಗೆ ಬೆಳಗ್ಗೆ 6ರಿಂದ ರಾತ್ರಿ 11 ಗಂಟೆಯ ತನಕ ಕೆಲಸ ಮಾಡಲು ಒತ್ತಾಯಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.