ಅನ್‌ಲಾಕ್ 5.0: ಅ.15ರಿಂದ ಶಾಲೆಗಳ ಪುನಾರಂಭಕ್ಕೆ ಮಾರ್ಗದರ್ಶಿ ಸೂತ್ರ ಬಿಡುಗಡೆ

Update: 2020-10-05 17:01 GMT
ಸಾಂದರ್ಭಿಕ ಚಿತ್ರ

ಲಕ್ನೋ,ಅ.5: ಅನ್‌ಲಾಕ್ ಪ್ರಕ್ರಿಯೆಯ 5ನೇ ಹಂತವಾಗಿ ಶಾಲೆಗಳನ್ನು ಪುನಾರಂಭಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಸೋಮವಾರ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.

   ಈ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅಕ್ಟೋಬರ್ 15ರಿಂದ ಶಾಲೆಗಳು ಹಾಗೂ ಕೋಚಿಂಗ್ ಸಂಸ್ಥೆಗಳನ್ನು ಹಂತಹಂತವಾಗಿ ತೆರೆಯಬಹುದಾಗಿದೆ. ಆದಾಗ್ಯೂ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ವಹಿಸಲಾಗಿದೆ.

  ಶಿಕ್ಷಣ ಹಾಗೂ ಸಾಕ್ಷರತೆ (ಡೊಸೆಲ್) ಇಲಾಖೆಯ ಪ್ರಮಾಣಿತ ಕಾರ್ಯವಿಧಾನಗಳ (ಎಸ್‌ಓಪಿ)ನ್ನು ಆಧರಿಸಿ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಶಿಕ್ಷಣ ಇಲಾಖೆಗಳು ಸಿದ್ಧಪಡಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪುನಾರಂಭಗೊಳ್ಳಲು ಅನುಮತಿ ಪಡೆದಿರುವ ಶಾಲೆಗಳು ಅನುಸರಿಸಬೇಕೆಂದು ಸೂಚನೆ ನೀಡಲಾಗಿದೆ.

  ಶಾಲೆಗಳ ಪುನಾರಂಭಕ್ಕೆ ನಿಗದಿಪಡಿಸಲಾದ ಮಾರ್ಗಸೂಚಿಗಳು ಎರಡು ಭಾಗಗಳನ್ನು ಒಳಗೊಂಡಿವೆ. ಮೊದಲ ಭಾಗದಲ್ಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಸುರಕ್ಷತೆ ಕುರಿತ ಪ್ರಮಾಣಿತ ಕಾರ್ಯವಿಧಾನಗಳನ್ನು ಸೂಚಿಸಲಾಗಿದೆ. ಎರಡನೇ ಭಾಗದಲ್ಲಿ ಶಾರೀರಿಕ ಅಂತರದೊಂದಿಗೆ ವಿದ್ಯಾರ್ಥಿಗಳು ಕಲಿಕೆ ನಡೆಸುವಂತೆ ಮಾಡುವುದನ್ನು ವಿವರಿಸಲಾಗಿದೆ.

  ಹಾಜರಾತಿಯ ನಿಯಮಗಳಲ್ಲಿಯೂ ಹೊಂದಾಣಿಕೆಯನ್ನು ಪ್ರದರ್ಶಿಸಬೇಕು ಹಾಗೂ ಶಾಲೆಗೆ ಭೌತಿಕವಾಗಿ ಹಾಜರಾಗುವ ಬದಲು ಆನ್‌ಲೈನ್ ತರಗತಿಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾಗಿದೆಯೆಂದು ಮಾರ್ಗದರ್ಶಿ ಸೂತ್ರಗಳು ತಿಳಿಸಿವೆ.

 ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಶಿಫಾರಸು ಮಾಡಿರುವ ಆರೋಗ್ಯ ಶಿಷ್ಟಾಚಾರಗಳನ್ನು ಶಾಲೆಗಳು ಅನುಸರಿಸಬೇಕೆಂದು ಮಾರ್ಗದರ್ಶಿ ಸೂತ್ರಗಳಲ್ಲಿ ಪ್ರತಿಪಾದಿಸಲಾಗಿದೆ.

ಮಾಗದರ್ಶಿ ಸೂತ್ರ: ಪ್ರಮುಖ ಅಂಶಗಳು

 ತರಗತಿಗಳಲ್ಲಿ ವಿದ್ಯಾರ್ಥಿಗಳ ನಡುವೆ ಪರಸ್ಪರ 6 ಅಡಿ ಅಂತರವಿರಬೇಕು. ಶಾಲಾ ಕೊಠಡಿ, ಪ್ರಯೋಗಶಾಲೆ, ಆಟದ ಸ್ಥಳಗಳಲ್ಲಿ ಎಲ್ಲ ಸಮಯದಲ್ಲೂ ಮಾಸ್ಕ್ ಧಾರಣೆ ಕಡ್ಡಾಯ

ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗುವಂತೆ ಮಾಡಲು ಪಾಲಕರ ಲಿಖಿತ ಒಪ್ಪಿಗೆ ಪಡೆಯಬೇಕು

ಶಾಲೆ ಪ್ರವೇಶಿಸುವ ಮುನ್ನ ಸ್ಕ್ರೀನಿಂಗ್ ಕಡ್ಡಾಯ. ಕೈ ನೈರ್ಮಲ್ಯದ ಸಾಧನಗಳನ್ನು ಇರಿಸಬೇಕು.

.ಶಾಲೆಗಳಲ್ಲಿ ಮಧ್ಯಾಹ್ನದೂಟವನ್ನು ಸಿದ್ಧಪಡಿಸುವಾಗ ಹಾಗೂ ಬಡಿಸುವಾಗ ಎಸ್‌ಓಪಿಯಲ್ಲಿ ನಿಗದಿಪಡಿಸಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು.

 ಶಾಲೆ ಪುನಾರಂಭಗೊಂಡ 2-3 ವಾರಗಳವರೆಗೆ ಯಾವುದೇ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ನಡೆಸಕೂಡದು. ಮಾಹಿತಿ, ಸಂವಹನ ತಂತ್ರಜ್ಞಾನ ಹಾಗೂ ಆನ್‌ಲೈನ್ ಕಲಿಕೆ ಮುಂದುವರಿಸುವುದಕ್ಕೆ ಶಾಲೆಗಳು ಉತ್ತೇಜನ ನೀಡಬೇಕು.

ಕೊರೋನ ವೈರಸ್ ಸೋಂಕಿನ ಹಾವಳಿ ತಡೆಗೆ ವಿಶ್ವಸಂಸ್ಥೆಯ ಮಕ್ಕಳ ನಿಧಿಯು ರೂಪಿದ ಮಾರ್ಗದರ್ಶಿ ಸೂತ್ರಗಳ ಪಟ್ಟಿಯನ್ನು ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News