×
Ad

ಹತ್ರಸ್ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ವಾದ್ರಾಗೆ ಹಲ್ಲೆ ಪ್ರಕರಣ

Update: 2020-10-05 22:36 IST

ಹೊಸದಿಲ್ಲಿ, ಅ. 5: ಉತ್ತರಪ್ರದೇಶದ ಹತ್ರಸ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಹತ್ರಸ್‌ಗೆ ತೆರಳಿದ್ದ ಸಂದರ್ಭ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಲ್ಲೆ ಮಾಡಿದ ಆರೋಪದ ಕುರಿತು ವಿವರಣೆ ನೀಡುವಂತೆ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ ಸೋಮವಾರ ಉತ್ತರಪ್ರದೇಶದ ಪೊಲೀಸರಿಗೆ ಸೂಚಿಸಿದೆ.

 ಈ ಅನುಚಿತ ವರ್ತನೆ ಸ್ವೀಕಾರಾರ್ಹವಲ್ಲ ಎಂದು ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ (ಎನ್‌ಸಿಡಬ್ಲ್ಯು) ಟ್ವೀಟ್ ಮಾಡಿದೆ. ‘‘ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹತ್ರಸ್‌ಗೆ ತೆರಳುತ್ತಿರುವಾಗ ದಾರಿ ಮಧ್ಯೆ ಪೊಲೀಸರು ಹಲ್ಲೆ ನಡೆಸಿರುವುದನ್ನು ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ ಖಂಡಿಸುತ್ತದೆ. ಈ ಅನುಚಿತ ವರ್ತನೆ ಸ್ವೀಕಾರಾರ್ಹವಲ್ಲ.

ಈ ಘಟನೆಯ ಸೂಕ್ಷ್ಮತೆ ಪರಿಗಣಿಸಿ, ನಮ್ಮ ಅಧ್ಯಕ್ಷೆ ರೇಖಾ ಶರ್ಮಾ ಅವರು ಪ್ರತಿಕ್ರಿಯೆ ನೀಡುವಂತೆ ಉತ್ತರಪ್ರದೇಶದ ಡಿಜಿಪಿಗೆ ಸೂಚಿಸಿದ್ದಾರೆ’’ ಎಂದು ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ ಟ್ವೀಟ್ ಮಾಡಿದೆ. ‘‘ಪತ್ರದ ಪ್ರತಿಯನ್ನು ಗೌತಮಬುದ್ಧ ನಗರದ ಜಿಲ್ಲಾ ದಂಡಾಧಿಕಾರಿ ಹಾಗೂ ಡಿಸಿಪಿಗೆ ಕಳುಹಿಸಿ ಕೊಡಲಾಗಿದೆ’’ ಎಂದು ಇನ್ನೊಂದು ಟ್ವೀಟ್‌ನಲ್ಲಿ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ ಹೇಳಿದೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಇತರ ನಾಯಕರು ಹತ್ರಸ್‌ಗೆ ತೆರಳುತ್ತಿದ್ದಾಗ ದಿಲ್ಲಿ-ಉತ್ತರಪ್ರದೇಶ ಗಡಿಯಲ್ಲಿ ಈ ಘಟನೆ ನಡೆದಿತ್ತು.

ದಿಲ್ಲಿ ನೋಯ್ಡಾ ಡೈರೆಕ್ಟ್ (ಡಿಎನ್‌ಡಿ) ಟೋಲ್ ಪ್ಲಾಝಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗೌತಮಬುದ್ಧ ನಗರ್ ಪೊಲೀಸರ ನಡುವೆ ಹೊಯ್ ಕೈ ನಡೆದಿತ್ತು. ಈ ಸಂದರ್ಭ ಹೆಲ್ಮೆಟ್ ಧರಿಸಿದ್ದ ಪೊಲೀಸ್ ಸಿಬ್ಬಂದಿಯೋರ್ವ ಪ್ರಿಯಾಂಕಾ ಗಾಂಧಿ ಅವರ ಮೇಲೆ ಹಲ್ಲೆ ನಡೆಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News