ಸೂಪರ್‌ಸಾನಿಕ್ ಕ್ಷಿಪಣಿ ನೆರವಿನ ಟಾರ್ಪೆಡೊ ಪರೀಕ್ಷಾ ಪ್ರಯೋಗ ಯಶಸ್ವಿ
ಭುವನೇಶ್ವರ, ಅ.5: ಸೂಪರ್‌ಸಾನಿಕ್ ಕ್ಷಿಪಣಿಗಳ ನೆರವಿನಿಂದ ಟಾರ್ಪೆಡೊಗಳನ್ನು ಹೊರಹೊಮ್ಮಿಸುವ ‘ಸೂಪರ್‌ಸಾನಿಕ್ ಮಿಸೈಲ್ ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪೆಡೊ (ಸ್ಮಾರ್ಟ್)’ ವ್ಯವಸ್ಥೆಗೆ ಚಾಲನೆ ನೀಡುವ ಮೂಲಕ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಿದೆ ಎಂದು ಮೂಲಗಳು ಹೇಳಿವೆ. ಸ್ಮಾರ್ಟ್ ಟಾರ್ಪೆಡೊ (ಹಡಗುಗಳನ್ನು ಸ್ಫೋಟಿಸುವ ಗುಂಡು)ಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಗೊಳಿಸಿದ್ದು ಇದರಿಂದ ಟಾರ್ಪೆಡೋಗಳ ವ್ಯಾಪ್ತಿಯಿಂದ ಹೊರಗಿರುವ ಶತ್ರುಗಳ ಸಬ್‌ಮೆರೀನ್‌ಗಳನ್ನೂ ಸ್ಫೋಟಿಸಬಹುದಾಗಿದೆ.
ಈ ಮೂಲಕ ಭಾರತ ಹೊಂದಿರುವ ಸಬ್‌ಮೆರೀನ್ ನಿರೋಧಕ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಪ್ರದರ್ಶಿಸಲಾಗಿದೆ ಎಂದು ಡಿಆರ್‌ಡಿಒ ಅಧ್ಯಕ್ಷ ಡಾ ಜಿ ಸತೀಶ್ ರೆಡ್ಡಿ ಹೇಳಿದ್ದಾರೆ. ಒಡಿಶಾ ಕರಾವಳಿತೀರದ ಅಬ್ದುಲ್ ಕಲಾಂ ದ್ವೀಪದಲ್ಲಿರುವ ರಕ್ಷಣಾ ನೆಲೆಯ ವೇದಿಕೆಯಲ್ಲಿ ಬೆಳಿಗ್ಗೆ 11.45ಕ್ಕೆ ನಡೆಸಲಾದ ಸ್ಮಾರ್ಟ್ ಟೊರ್ಪೆಡೊ ವ್ಯವಸ್ಥೆಯ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ. ಉದ್ದೇಶಿತ ವ್ಯಾಪ್ತಿ ಮತ್ತು ಎತ್ತರ, ಶಂಕುವಿನಾಕೃತಿಯ ಮೂತಿಯ ಭಾಗದ ಪ್ರತ್ಯೇಕಿಸುವಿಕೆ, ಟೊರ್ಪೆಡೋ ಹೊರಹೊಮ್ಮುವಿಕೆ ಹಾಗೂ ವೇಗ ಕಡಿತ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ರೇಡಾರುಗಳು, ಇಲೆಕ್ಟ್ರೋ-ಆಪ್ಟಿಕಲ್ ವ್ಯವಸ್ಥೆಗಳ ಸಹಿತ ಎಲ್ಲಾ ಶೋಧಕ ವ್ಯವಸ್ಥೆಗಳ ಮೇಲ್ವಿಚಾರಣೆ ಯಶಸ್ವಿಯಾಗಿದೆ. ಸಬ್‌ಮೆರೀನ್ ನಿರೋಧಕ ಯುದ್ಧವ್ಯವಸ್ಥೆಯಲ್ಲಿ ಸ್ಮಾರ್ಟ್ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸಲಿದೆ. ಭಾರತ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಗೊಳಿಸಿದ ಮಹತ್ವದ ಕ್ಷಿಪಣಿ ತಂತ್ರಜ್ಞಾನ ಇದಾಗಿದೆ ಎಂದು ರೆಡ್ಡಿ ಹೇಳಿದ್ದಾರೆ. ಎರಡು ವಿಭಿನ್ನ ಶಸ್ತ್ರಾಸ್ತ್ರ ವ್ಯವಸ್ಥೆಗಳ ತಂತ್ರಜ್ಞಾನವನ್ನು ಒಳಗೊಂಡಿರುವ ಶಕ್ತಿಶಾಲಿ ಸ್ಮಾರ್ಟ್ ಕ್ಷಿಪಣಿ ವ್ಯವಸ್ಥೆ ಟಾರ್ಪೆಡೊಗಳ ಹೊರಹೊಮ್ಮುವಿಕೆ ಪ್ರಕ್ರಿಯೆಯನ್ನು ಅತ್ಯಂತ ರಹಸ್ಯವಾಗಿ ಮತ್ತು ಶಕ್ತಿಶಾಲಿಯಾಗಿ ನಿರ್ವಹಿಸುತ್ತದೆ. ಇದರೊಂದಿಗೆ ಭಾರತ ಅತ್ಯಧಿಕ ದೂರದ ವ್ಯಾಪ್ತಿಗೆ ತಲುಪಬಲ್ಲ ಟಾರ್ಪೆಡೊ ವ್ಯವಸ್ಥೆಯನ್ನು ಹೊಂದಿದಂತಾಗಿದೆ. 50 ಕಿ.ಮೀ ವ್ಯಾಪ್ತಿಯ ಟಾರ್ಪೆಡೊ ವಿಶ್ವದಲ್ಲಿ ಅತ್ಯಧಿಕ ದೂರ ತಲುಪಲ್ಲ ಟಾರ್ಪೆಡೋ ಆಗಿದ್ದರೆ, ಕ್ಷಿಪಣಿಯ ನೆರವು ಹೊಂದಿರುವ ಟಾರ್ಪೆಡೋದ ಗರಿಷ್ಠ ವ್ಯಾಪ್ತಿ 150 ಕಿ.ಮೀ. ಆದರೆ ಭಾರತದ ‘ಸ್ಮಾರ್ಟ್’ ತಂತ್ರಜ್ಞಾನ ಆಧಾರಿತ ಟಾರ್ಪೆಡೊ 600 ಕಿ.ಮೀ ದೂರದ ವ್ಯಾಪ್ತಿಯನ್ನು ತಲುಪಬಲ್ಲದು. ಇದನ್ನು ಉಡಾಯಿಸಿದಾಗ ಸೂಪರ್‌ಸಾನಿಕ್ ಕ್ಷಿಪಣಿಯಂತೆ ಆಗಸಕ್ಕೆ ನೆಗೆಯುತ್ತದೆ.
ಕಡಿಮೆ ಎತ್ತರದಲ್ಲಿ ಸಾಗುತ್ತಾ, ಗುರಿಯನ್ನು ಸಮೀಪಿಸಿದಾಗ ಟಾರ್ಪೆಡೋವನ್ನು ನೀರಿಗೆ ಹೊರಹೊಮ್ಮಿಸುತ್ತದೆ. ಬಳಿಕ ಟಾರ್ಪೆಡೊ ಉದ್ದೇಶಿತ ಗುರಿಯತ್ತ ಚಲಿಸಿ ಅದನ್ನು ನಾಶಗೊಳಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಮಹತ್ವದ ಸಾಧನೆಗೆ ಡಿಆರ್‌ಡಿಒ ವಿಜ್ಞಾನಿಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.