ಬಿಹಾರ ವಿಧಾನಸಭೆ ಚುನಾವಣೆ: ಅತ್ಯಾಚಾರಿ ಆರೋಪಿಗಳಿಗೆ ಟಿಕೆಟ್ ನಿರಾಕರಿಸಿದ ಆರ್‌ಜೆಡಿ
ಹೊಸದಿಲ್ಲಿ, ಅ. 5: ಬಿಹಾರ ವಿಧಾನಸಭೆ ಚುನಾವಣೆಯ ಸ್ಪರ್ಧಿಗಳ ಮೊದಲ ಪಟ್ಟಿಯನ್ನು ಆರ್‌ಜೆಡಿ ಸೋಮವಾರ ಬಿಡುಗಡೆ ಮಾಡಿದೆ. ಬಿಹಾರದ 16 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇದಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅತ್ಯಾಚಾರ ಆರೋಪಿಗಳಾದ ಇಬ್ಬರು ಹಾಲಿ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ (ಪ್ರಸ್ತುತ 1990ರ ಮೇವು ಹಗರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ) ನೇತೃತ್ವದ ಆರ್‌ಜೆಡಿ ಟಿಕೆಟ್ ನೀಡಲು ನಿರಾಕರಿಸಿದೆ. ಇದರ ಬದಲು ಶಾಸಕರ ಪತ್ನಿಯರಿಗೆ ಟಿಕೆಟ್ ನೀಡಿದೆ. ನವಾಡ ವಿಧಾನ ಸಭೆ ಕ್ಷೇತ್ರಕ್ಕೆ ವಿಭವ್ ದೇವಿ ಅವರಿಗೆ ಟಿಕೆಟ್ ನೀಡಿದೆ. ಅವರ ಪತಿ ರಾಜ್ ಬಲ್ಲಾಭ್ ಯಾದವ್ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳನ್ನು ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಇನ್ನೋರ್ವ ಆರ್‌ಜೆಡಿ ಅಭ್ಯರ್ಥಿ ಕಿರಣ್ ದೇವಿ. ಅವರು ಸಂದೇಶ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರ ಭೋಜಪುರ ಜಿಲ್ಲೆಯಲ್ಲಿದೆ. ಅವರ ಪತಿ ಅರುಣ್ ಯಾದವ್ ಅತ್ಯಾಚಾರ ಆರೋಪಿಯಾಗಿದ್ದು, ವರ್ಷಗಳ ಹಿಂದೆ ಪರಾರಿಯಾಗಿದ್ದಾನೆ.