ಕಾಸರಗೋಡು : ಅಕ್ರಮ ಸಾಗಾಟ ; 2.5 ಕೋಟಿ ರೂ. ಮೌಲ್ಯದ ಶ್ರೀಗಂಧ ವಶ

Update: 2020-10-06 05:20 GMT

ಕಾಸರಗೋಡು :  ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಸುಮಾರು ಒಂದು ಕ್ವಿ೦ಟಾಲ್ ಶ್ರೀಗಂಧದ ಕೊರಡುಗಳನ್ನು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ನೇತೃತ್ವದ ತಂಡ ವಶಪಡಿಸಿಕೊಂಡ ಘಟನೆ ಕಾಸರಗೋಡು ನಗರ ಹೊರವಲಯದಲ್ಲಿ ಇಂದು ಮುಂಜಾನೆ ನಡೆದಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಅಧಿಕೃತ ನಿವಾಸದ ಸಮೀಪದಿಂದ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ ಶ್ರೀಗಂಧದ ಮೌಲ್ಯ ಸುಮಾರು 2.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇಂದು ಮುಂಜಾನೆ 4.30ರ ಸುಮಾರಿಗೆ ಜಿಲ್ಲಾಧಿಕಾರಿ, ಅವರ ಕಾರು ಚಾಲಕ ಹಾಗೂ ಗನ್ ಮ್ಯಾನ್ ಎಚ್ಚೆತ್ತಾಗ ಮನೆ ಸಮೀಪ ಭಾರೀ ಶಬ್ದ ಕೇಳಿ ಬಂದಿದ್ದು, ಗನ್ ಮ್ಯಾನ್ ಮತ್ತು ಚಾಲಕ ಹೊರ ಬಂದು ನೋಡಿದಾಗ ಸಮೀಪದ ಮನೆಯಂಗಳದಲ್ಲಿ ನಿಲುಗಡೆಗೊಳಿಸಿದ್ದ ಲಾರಿಗೆ  ಶ್ರೀಗಂಧದ ಕೊರಡುಗಳನ್ನು ತುಂಬಿಸುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತಲುಪಿದ  ಜಿಲ್ಲಾಧಿಕಾರಿ ಪೊಲೀಸರ ನೆರವಿನೊಂದಿಗೆ ಅಕ್ರಮವನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಮೆಂಟ್ ಸಾಗಾಟದ ಲಾರಿಯಲ್ಲಿ ವಿಶೇಷ ಕ್ಯಾಬಿನ್ ನಿರ್ಮಿಸಿ ಅದರೊಳಗೆ ಶ್ರೀಗಂಧದ ಕೊರಡುಗಳನ್ನು ತುಂಬಿಸಿ ಸಾಗಿಸಲಾಗುತ್ತಿತ್ತು. ಮನೆ ಮಾಲಕ ಹಾಗೂ ಆರೋಪಿಗಳು ದಾಳಿ ಸಂದರ್ಭ ಪರಾರಿಯಾಗಿದ್ದಾರೆ. ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾ೦ತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದು,  ಹೆಚ್ಚಿನ ತನಿಖೆ  ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News