ಸುಶಾಂತ್ ಪ್ರಕರಣ: ಮುಂಬೈ ಪೊಲೀಸರು, ಮಹಾರಾಷ್ಟ್ರ ಸರಕಾರದ ವಿರುದ್ಧ ಟ್ವೀಟ್ ಮಾಡಲು 80,000 ನಕಲಿ ಖಾತೆಗಳ ಸೃಷ್ಟಿ!

Update: 2020-10-06 10:13 GMT

ಹೊಸದಿಲ್ಲಿ : ಸುಶಾಂತ್ ಸಿಂಗ್ ರಾಜಪುತ್ ಸಾವು ಪ್ರಕರಣದ ತನಿಖೆಯನ್ನು ಆರಂಭದಲ್ಲಿ ನಡೆಸುತ್ತಿದ್ದ ಮುಂಬೈ ಪೊಲೀಸ್ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ 'ಚ್ಯುತಿ' ತರುವ ಉದ್ದೇಶದಿಂದ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿದ್ದಾರೆನ್ನಲ್ಲಾದ 80,000 ನಕಲಿ ಖಾತೆಗಳನ್ನು ಮುಂಬೈ ಪೊಲೀಸರು ಗುರುತಿಸಿದ್ದಾರೆ. ಮುಂಬೈ ಪೊಲೀಸರ ಸೈಬರ್ ಘಟಕ ಈ ಕುರಿತು ವರದಿಯೊಂದನ್ನೂ ಸಿದ್ಧಪಡಿಸಿದೆಯೆನ್ನಲಾಗಿದ್ದು #justiceforsushant ಹಾಗೂ #SSR ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಹೊಂದಿದ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಇಟಲಿ, ಜಪಾನ್, ಪೋಲೆಂಡ್  ಸ್ಲೊವೇನಿಯಾ, ಇಂಡೊನೇಷ್ಯಾ, ಟರ್ಕಿ, ಥೈಲ್ಯಾಂಡ್, ರೊಮಾನಿಯಾ ಮತ್ತು ಫ್ರಾನ್ಸ್ ದೇಶಗಳಿಂದ ಮಾಡಲಾಗಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿದೆ.

ವಿದೇಶಿ ಭಾಷೆಗಳಲ್ಲಿದ್ದ ಈ ಪೋಸ್ಟ್ ಗಳಲ್ಲಿ ಹ್ಯಾಶ್ ಟ್ಯಾಗ್‍ಗಳನ್ನು ಗಮನಿಸಲಾಗಿತ್ತು. ಇನ್ನಷ್ಟು ಖಾತೆಗಳ ಮೂಲಕವೂ ಇಂತಹ ಟ್ವೀಟ್‍ಗಳು ಬಂದಿರಬಹುದೆಂದು ಮುಂಬೈ ಪೊಲೀಸರು ಹೇಳಿದ್ದಾರೆ.  ಇಂತಹ ಪೋಸ್ಟ್ ಗಳನ್ನು ಮಾಡಿದ ನಕಲಿ ಖಾತೆಗಳನ್ನು ಗುರುತಿಸಿ ಐಟಿ ಕಾಯಿದೆಯನ್ವಯ ಪ್ರಕರಣ ದಾಖಲಿಸುವಂತೆ ಸೈಬರ್ ಘಟಕಕ್ಕೆ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಆದೇಶಿಸಿದ್ದಾರೆ.

ಮುಂಬೈ ಪೊಲೀಸರನ್ನು ನಿಂದಿಸುವ ಉದ್ದೇಶದಿಂದಲೇ ಹಲವಾರು ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಹ್ಯಾಶ್ ಟ್ಯಾಗ್‍ಗಳು ವ್ಯಾಪಕವಾಗಿ ಹರಡುವಂತೆ ಮಾಡಲು ಆಟೊಮೇಟೆಡ್ ಬಾಟ್ ಹಾಗೂ ವಿದೇಶಿ ಖಾತೆಗಳನ್ನು ಬಳಸಲಾಗಿತ್ತು ಎಂದೂ ತಿಳಿದು ಬಂದಿದೆ.

'ಷಡ್ಯಂತ್ರ' ಎಂದು ಹುಯಿಲೆಬ್ಬಿಸಿದ ಹಿಂದೆ ಬಿಜೆಪಿ ಕೈವಾಡವಿದೆ ಎಂದ ಮಿಚಿಗನ್ ವಿವಿ ಅಧ್ಯಯನ

ಇತ್ತೀಚೆಗೆ ಮಿಚಿಗನ್ ವಿಶ್ವವಿದ್ಯಾಲಯದ ತಂಡವೊಂದು ಸೋಶಿಯಲ್ ಮೀಡಿಯಾ ಟ್ರೆಂಡ್, ವಿವಿಧ ರಾಜಕಾರಣಿಗಳ ಟ್ವೀಟ್ ಮುಂತಾದವುಗಳನ್ನು ಅಧ್ಯಯನ ನಡೆಸಿ  ಸುಶಾಂತ್ ಸಾವು ಆತ್ಮಹತ್ಯೆಯಲ್ಲಿ ಕೊಲೆ ಹಾಗೂ ಅದರ ಹಿಂದೆ ಷಡ್ಯಂತ್ರವಿದೆಯೆಂಬ ಆರೋಪದ ಹಿಂದೆ ಹಲವು ಬಿಜೆಪಿ ಸದಸ್ಯರ ಪಾತ್ರವಿದೆಯೆಂದು ಕಂಡುಕೊಂಡಿತ್ತು. ಜೂನ್ 14 ಹಾಗೂ ಸೆಪ್ಟೆಂಬರ್ 12ರ ನಡುವಿನ ಹಲವು  ಟ್ವೀಟ್‍ಗಳು ಸುಶಾಂತ್ ಸಾವಿನ ಕಾರಣದ ಕುರಿತು ವದಂತಿಗಳಿಗೆ ಹೇಗೆ ಕಾರಣವಾಗಿತ್ತೆಂದು ತಂಡ ಅಧ್ಯಯನ ನಡೆಸಿದೆ.

ಸುಶಾಂತ್ ಸಾವಿನ ಕುರಿತು ಆರಂಭಿಕ ತನಿಖೆ ನಡೆಸಿದ್ದ ಮುಂಬೈ ಪೊಲೀಸರನ್ನು ಹಲವರು ಟ್ರೋಲ್ ಮಾಡಿದ್ದರೂ ಈ ಮಂದಿಯಲ್ಲಿ ಹೆಚ್ಚಿನವರು ಬಿಜೆಪಿಗರಾಗಿದ್ದರು ಎಂದೂ ಅಧ್ಯಯನ ಕಂಡುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News