"ಹತ್ರಸ್ ಘಟನೆ 'ಭಯಾನಕ', ಸಂತ್ರಸ್ತೆ ಕುಟುಂಬ ಹಾಗೂ ಸಾಕ್ಷಿಗಳ ರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದೀರಿ?"

Update: 2020-10-06 11:08 GMT

ಹೊಸದಿಲ್ಲಿ: ಹತ್ರಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಘಟನೆಯನ್ನು 'ಭಯಾನಕ' ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಸಂತ್ರಸ್ತೆಯ ಕುಟುಂಬ ಹಾಗೂ ಪ್ರಕರಣಗಳ ಸಾಕ್ಷಿಗಳ ರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ವಕೀಲರ ಸೇವೆ ದೊರಕಿದೆಯೇ ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಕೇಳಿದೆ.

ಹತ್ರಸ್ ಘಟನೆಯ ಸಿಬಿಐ ತನಿಖೆ ಅಥವಾ ಎಸ್‍ಐಟಿ ತನಿಖೆ ನಡೆಸುವಂತೆ ಕೋರಿ ಸಾಮಾಜಿಕ ಹೋರಾಟಗಾರ್ತಿ ಸತ್ಯಮಾ ದುಬೆ ಮತ್ತಿತರರು ಸಲ್ಲಿಸಿರುವ ಅಪೀಲಿನ ಮೇಲೆ ಇಂದು ವಿಚಾರಣೆ ನಡೆದಾಗ ನ್ಯಾಯಾಲಯ ಮೇಲಿನಂತೆ ಹೇಳಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದೂ ಅಪೀಲಿನಲ್ಲಿ ಕೋರಲಾಗಿದೆಯಲ್ಲದೆ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ರಾತ್ರೋರಾತ್ರಿ ನಡೆಸಿದ ಉತ್ತರ ಪ್ರದೇಶ ಪೊಲೀಸರ ಕ್ರಮ ಹಾಗೂ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೊರಟ ಸಂದರ್ಭ ವಿಪಕ್ಷ ನಾಯಕರು ಎದುರಿಸಿದ ಸಮಸ್ಯೆಗಳತ್ತವೂ ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಅಪೀಲುದಾರರು ಅಲಹಾಬಾದ್ ಹೈಕೋರ್ಟಿಗೆ ಅಪೀಲು ಏಕೆ ಸಲ್ಲಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದಾಗ ಪ್ರಕರಣ ಈಗಾಗಲೇ ಅಲ್ಲಿದೆ ಆದರೆ ಅಲ್ಲಿಂದ ಸುಪ್ರೀಂ ಕೋರ್ಟಿಗೆ ವರ್ಗಾಯಿಸಲು ಮನವಿ ಮಾಡಲಾಗಿದೆ ಎಂದು ವಕೀಲೆ ಕೀರ್ತಿ ಸಿಂಗ್ ಹೇಳಿದಾಗ "ಅಲಹಾಬಾದ್ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಿದಾಗ ಅದರ ಅಭಿಪ್ರಾಯಗಳು ತಿಳಿಯುತ್ತವೆ, ಏನಾದರೂ ತಪ್ಪಾದರೆ ನಾವಿದ್ದೇವೆ,'' ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದರು.

ಈತನ್ಮಧ್ಯೆ ಉತ್ತರ ಪ್ರದೇಶ ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‍ನಲ್ಲಿ "ಮರುದಿನ ಬೆಳಿಗ್ಗೆ ದೊಡ್ಡ ಮಟ್ಟದ ಹಿಂಸೆಯನ್ನು ತಡೆಯಲು ಮಧ್ಯರಾತ್ರಿ ನಂತರ ಅಂತ್ಯಕ್ರಿಯೆ ನಡೆಸಲಾಯಿತು, ಮರುದಿನ ಬಾಬ್ರಿ ಮಸೀದಿ ತೀರ್ಪು ಕೂಡ ಬರಲಿದ್ದುದರಿದ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದೆಂಬ ಗುಪ್ತಚರ ವರದಿಗಳೂ ಇದ್ದವು,'' ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News