ಉದ್ಯಮದಲ್ಲಿ ನಷ್ಟ : ಸಾಲ ನೀಡಿದ್ದ ಎರಡು ಬ್ಯಾಂಕ್‍ಗಳನ್ನೇ ದರೋಡೆಗೈದ ಉದ್ಯಮಿಯ ಬಂಧನ

Update: 2020-10-06 14:41 GMT

ಭುವನೇಶ್ವರ : ಕೋವಿಡ್ ಲಾಕ್ ಡೌನ್‍ನಿಂದಾಗಿ ನಷ್ಟ ಅನುಭವಿಸಿದ ಉದ್ಯಮಿಯೊಬ್ಬ ತನಗೆ ಸಾಲ ನೀಡಿದ್ದ ಎರಡು ಬ್ಯಾಂಕುಗಳನ್ನೇ ದರೋಡೆ ಮಾಡಿ ಕೊನೆಗೆ ಸಿಕ್ಕಿ ಬಿದ್ದಿದ್ದಿರುವ ಘಟನೆ ವರದಿಯಾಗಿದೆ. 

ಆರೋಪಿ ಸೌಮ್ಯ ರಂಜನ್ ಜೇನಾ ನಗರದಲ್ಲಿ ಬಟ್ಟೆ ಮಳಿಗೆ ಹೊಂದಿದ್ದ.  ಎರಡು ಬ್ಯಾಂಕುಗಳಿಂದ ಆತ 17 ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದ್ದು ಎರಡು ದರೋಡೆ ಪ್ರಕರಣಗಳಲ್ಲಿ 12 ಲಕ್ಷ ರೂ., ಲೂಟಿ ಮಾಡಿ ಅದೇ ಹಣ ಬಳಸಿ ಇಎಂಐ ಪಾವತಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡನೇ ಪಿಯುಸಿ ತನಕ ಶಿಕ್ಷಣ ಪಡೆದಿದ್ದ ಈತನ ಮಾಸಿಕ ವಹಿವಾಟು 7 ಲಕ್ಷ ರೂ. ತನಕ ಇತ್ತಾದರೂ ಲಾಕ್ ಡೌನ್ ಸಂದರ್ಭ ಆತನಿಗೆ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದ. ಸೆಪ್ಟೆಂಬರ್ 7ರಂದು ಆಟಿಕೆ ಪಿಸ್ತೂಲ್ ಬಳಸಿ ನಂದನ್ ವಿಹಾರ್ ಪ್ರದೇಶದಲ್ಲಿರುವ ಇಂಡಿಯನ್ ಓವರ್‍ಸೀಸ್ ಬ್ಯಾಂಕ್  ಶಾಖೆಯಿಂದ 2,81,700 ರೂ.  ದರೋಡೆಗೈದಿದ್ದ ಈತ ಸೆಪ್ಟೆಂಬರ್ 28ರಂದು ಬ್ಯಾಂಕ್ ಆಫ್ ಇಂಡಿಯಾದ ಬರಿಮುಂಡ ಶಾಖೆಯಿಂದ 9.53 ಲಕ್ಷ ರೂ.ಲೂಟಿಗೈದಿದ್ದ. ಸಿಸಿಟಿವಿ ಪರಿಶೀಲಿಸಿದಾಗ ಎರಡೂ ದರೋಡೆ ಪ್ರಕರಣದ ಆರೋಪಿ ಒಂದೇ ಬಣ್ಣದ ಬೈಕಿನಲ್ಲಿ ಒಂದೇ ದಿಕ್ಕಿನತ್ತ ಸಾಗಿದ್ದನ್ನು ಗಮನಿಸಿದ್ದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News