ನನಗೆ ಸ್ವತಂತ್ರ ಮಾಧ್ಯಮ,ಸಂಸ್ಥೆಗಳನ್ನು ನೀಡಿದರೆ ಕೇಂದ್ರ ಸರಕಾರ ಹೆಚ್ಚು ಕಾಲ ಬಾಳದು : ರಾಹುಲ್ ಗಾಂಧಿ

Update: 2020-10-06 12:57 GMT

ಅಮೃತಸರ : ``ನನಗೆ ಸ್ವತಂತ್ರ ಮಾಧ್ಯಮ ಹಾಗೂ ಇತರ ಪ್ರಮುಖ ಸಂಸ್ಥೆಗಳನ್ನು ನೀಡಿ, ಆಗ ಈ ಸರಕಾರ (ಮೋದಿ ಸರಕಾರ) ಹೆಚ್ಚು ಸಮಯ ಬಾಳದು,'' ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ವಿಪಕ್ಷಗಳು ದುರ್ಬಲವಾಗಿರುವುದರಿಂದ ಕೇಂದ್ರ ಸರಕಾರ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ರಾಹುಲ್ ಮೇಲಿನಂತೆ ಹೇಳಿದ್ದಾರೆ.

ಕೃಷಿ ಮಸೂದೆಗಳ ವಿರುದ್ಧ ಪಂಜಾಬ್ ರಾಜ್ಯದಲ್ಲಿ ತಾವು ಮೂರು ದಿನಗಳ ಕಾಲ ನಡೆಸಿದ ‘ಖೇತಿ ಬಚಾವೋ ಯಾತ್ರೆ’ಯ ಅಂತಿಮ ದಿನದಂದು  ಪಟಿಯಾಲಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್, ``ಬಿಜೆಪಿ ಸರಕಾರ ದೇಶದ ಆತ್ಮವನ್ನೇ ಕಸಿದಿದೆ,'' ಎಂದು ಹೇಳಿದರು.

``ಒಂದು ದೇಶದ  ಭೂಭಾಗವನ್ನು ಇನ್ನೊಂದು ದೇಶ ಆಕ್ರಮಿಸಿದ್ದರೂ   ಮಾಧ್ಯಮ ಕೂಡ ಸರಕಾರವನ್ನು ಪ್ರಶ್ನಿಸದೇ ಇರುವಂತಹ ಪರಿಸ್ಥಿತಿಯನ್ನು ಜಗತ್ತಿನ ಯಾವುದೇ ದೇಶ ಇಂದು  ಎದುರಿಸುತ್ತಿಲ್ಲ,'' ಎಂದು ಹೇಳಿದ ರಾಹುಲ್ ``ನೀವೇಕೆ ಅವರನ್ನು ಪತ್ರಿಕಾಗೋಷ್ಠಿಗಳಲ್ಲಿ ಪ್ರಶ್ನಿಸಬಾರದು?,'' ಎಂದು ಮಾಧ್ಯಮಗಳನ್ನು ಕೇಳಿದರು.

``ಸರಕಾರ ವಿವಿಧ ಸಂಸ್ಥೆಗಳನ್ನು ತನ್ನ ಕೈವಶ ಮಾಡಿರಬಹುದು, ಆದರೆ ರೈತರನ್ನು, ಯುವಜನತೆಯನ್ನು ಹಾಗೂ ಸಣ್ಣ ವರ್ತಕರ ವಿಚಾರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ.  ಮೋದಿ ಸರಕಾರದ ನೀತಿಗಳಿಂದ ತೀವ್ರ ಬಾಧಿತ ಜನರೊಂದಿಗೆ ನಾನಿದ್ದೇನೆ. ನಾನು ತಾಳ್ಮೆ ಇರುವ ವ್ಯಕ್ತಿ, ಜನರಿಗೆ ಸತ್ಯದ ಅರಿವು ಆಗುವ  ತನಕ ಕಾಯುತ್ತೇನೆ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News