ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಪಂಜಾಬ್ ಸಚಿವ ಬಲ್ಬೀರ್ ಸಿಂಗ್‌ಗೆ ಕೊರೋನ ಸೋಂಕು

Update: 2020-10-06 17:05 GMT

ಚಂಡಿಗಢ, ಅ. 6: ಸಂಗ್ರೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇತ್ತೀಚೆಗೆ ವೇದಿಕೆ ಹಂಚಿಕೊಂಡ ಪಂಜಾಬ್‌ನ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಅವರಿಗೆ ಕೊರೋನ ಸೋಂಕು ಮಂಗಳವಾರ ದೃಢಪಟ್ಟಿದೆ.

ಬಲ್ಬೀರ್ ಸಿಂಗ್ ಸಿಧು ಅವರಿಗೆ ಲಘು ಜ್ವರ ಹಾಗು ಗಂಟಲು ನೋವು ಇದೆ ಎಂದು ಮೊಹಾಲಿಯ ಸಿವಿಲ್ ಸರ್ಜನ್ ಮನ್ ಜಿತ್ ಸಿಂಗ್ ಹೇಳಿದ್ದಾರೆ. ಸಚಿವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಮನೆಯಲ್ಲಿ ಐಸೋಲೇಶನ್‌ನಲ್ಲಿ ಇದ್ದಾರೆ. ಅವರೊಂದಿಗೆ ಸಂಪರ್ಕ ಇರಿಸಿಕೊಂಡವರು ಕೊರೋನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ನೂತನ ಕೃಷಿ ಕಾಯ್ದೆ ವಿರೋಧಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಗ್ರೂರಿನಲ್ಲಿ ಕಳೆದ ಸೋಮವಾರ ನಡೆದ ಕಾಂಗ್ರೆಸ್‌ನ ‘ಖೇತಿ ಬಚಾವೊ ಯಾತ್ರಾ’ (ಕೃಷಿಭೂಮಿ ಉಳಿಸಿ ಯಾತ್ರೆ)ದಲ್ಲಿ ಬಲ್ಬೀರ್ ಸಿಂಗ್ ಸಿಧು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಂಜಾಬ್‌ನ ಎಐಸಿಸಿ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್, ಪಂಜಾಬ್ ಕಾಂಗ್ರೆಸ್‌ನ ವರಿಷ್ಠ ಸುನೀಲ್ ಜಾಖಡ್, ಸಚಿವರಾದ ಬಲ್ಬೀರ್ ಸಿಂಗ್ ಸಿಧು, ವಿಜಯ್ ಇಂದರ್ ಸಿಂಗ್ಲಾ, ರಾಣಾ ಗುರ್ಮಿತ್ ಸೋದಿ ಹಾಗೂ ರಾಜ್ಯಸಭಾ ಸದಸ್ಯ ದೀಪೇಂದರ್ ಹೂಡಾ ಮೊದಲಾದವರು ಪಾಲ್ಗೊಂಡಿದ್ದರು.

ನೂತನ ಕೃಷಿ ಕಾಯ್ದೆ ವಿರುದ್ಧ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಮೂರು ದಿನಗಳ ಕಾಲ ‘ಟ್ರ್ಯಾಕ್ಟರ್ ರ್ಯಾಲಿ’ ನಡೆಸಿದ್ದರು. ಪ್ರತಿಭಟನೆ ಮುಂದುವರಿಸಲು ಅವರು ಬುಧವಾರ ನೆರೆಯ ಹರ್ಯಾಣ ರಾಜ್ಯಕ್ಕೆ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News