ಕೃಷಿ ಕಾನೂನಿನ ವಿರುದ್ಧ ಹೋರಾಟ ರೈತರದ್ದು ಮಾತ್ರವಲ್ಲ, ಅದು ಭಾರತದ ಹೋರಾಟವಾಗಿದೆ: ರಾಹುಲ್ ಗಾಂಧಿ

Update: 2020-10-06 17:38 GMT

ಹೊಸದಿಲ್ಲಿ,ಅ.6: ನೂತನ ಕೃಷಿ ಕಾನೂನುಗಳ ಕುರಿತು ಮಂಗಳವಾರವೂ ಕೇಂದ್ರದ ವಿರುದ್ಧ ದಾಳಿಯನ್ನು ಮುಂದುವರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಈ ಕಾನೂನುಗಳ ವಿರುದ್ಧದ ಹೋರಾಟ ರೈತರು ಮತ್ತು ಕಾರ್ಮಿಕರದ್ದು ಮಾತ್ರವಲ್ಲ,ಅದು ಭಾರತದ ಹೋರಾಟವೂ ಆಗಿದೆ ಎಂದು ಹೇಳಿದರು. ಹರ್ಯಾಣದ ಗಡಿಯಲ್ಲಿ ರಾಹುಲ್ ನೇತೃತ್ವದ ಟ್ರ್ಯಾಕ್ಟರ್ ರ್ಯಾಲಿಯನ್ನು ಸ್ವಲ್ಪ ಸಮಯ ತಡೆಹಿಡಿಯಲಾಗಿತ್ತಾದರೂ ಬಳಿಕ ರಾಜ್ಯ ಪ್ರವೇಶಕ್ಕೆ ಅನುಮತಿಯನ್ನು ನೀಡಲಾಗಿತ್ತು.

  ರವಿವಾರ ಪಂಜಾಬಿನ ಮೋಗಾ ಜಿಲ್ಲೆಯಿಂದ ಆರಂಭಗೊಂಡಿದ್ದ ‘ಖೇತಿ ಬಚಾವೊ ಯಾತ್ರಾ’ದ ಅಂತಿಮ ದಿನ ಭಾರೀ ಸಂಖ್ಯೆಯಲ್ಲಿ ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಉಪಸ್ಥಿತರಿದ್ದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್,ಈ ಕಾನೂನುಗಳು ಜಾರಿಗೊಂಡರೆ ರೈತರು ಕೆಲವೇ ಕಾರ್ಪೊರೇಟ್ ಸಂಸ್ಥೆಗಳ ಗುಲಾಮರಾಗುತ್ತಾರೆ. ಒಂದೆರಡು ವರ್ಷಗಳಲ್ಲಿ ಈ ಆಯ್ದ ಸಂಸ್ಥೆಗಳು ಅವರ ಭೂಮಿಯನ್ನು ಕಬಳಿಸಲಿವೆ ಎಂದು ಹೇಳಿದರು.

ನೀವು ನಂಬಿ ಅಥವಾ ಬಿಡಿ,ನಿಮ್ಮ ಭೂಮಿಯನ್ನು ಕಿತ್ತುಕೊಳ್ಳಲಾಗುವುದು ಎಂದು ರಾಹುಲ್ ಮತ್ತು ಅಮರಿಂದರ್ ಸಿಂಗ್(ಪಂಜಾಬ್ ಮುಖ್ಯಮಂತ್ರಿ) ಒಮ್ಮೆ ನಿಮಗೆ ಹೇಳಿದ್ದರು ಎನ್ನುವುದನ್ನು ನೆನಪಿಟ್ಟುಕೊಳ್ಳಿ. ನೀವು ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ. ನೀವು ಆರು ತಿಂಗಳು ಅಥವಾ ಒಂದು ವರ್ಷ ಕಾದರೆ ಅದರಿಂದೇನೂ ಉಪಯೋಗವಿಲ್ಲ. ನಷ್ಟವು ಕೇವಲ ರೈತರು,ಕೃಷಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಮಾತ್ರವಲ್ಲ. ಅದು ಇಡೀ ದೇಶದ ನಷ್ಟವಾಗಿದೆ ಎಂದು ಅವರು ಹೇಳಿದರು.

ನೂತನ ಕೃಷಿ ಕಾನೂನುಗಳ ಜಾರಿಯಿಂದ ರೈತರಿಗೆ ಹೊಡೆತ ಬೀಳುತ್ತದೆ ಮತ್ತು ಭಾರತವು ತನ್ನ ಆಹಾರ ಭದ್ರತೆಯನ್ನು ಕಳೆದುಕೊಳ್ಳುತ್ತದೆ. ಹಾಗೇನಾದರೂ ಆದರೆ ಭಾರತವು ಇನ್ನೊಮ್ಮೆ ಗುಲಾಮ ದೇಶವಾಗುತ್ತದೆ ಎಂದ ರಾಹುಲ್,ಕೇಂದ್ರದ ನರೇಂದ್ರ ಮೋದಿ ಸರಕಾರವು ತನ್ನ ಆರು ವರ್ಷಗಳ ಅಧಿಕಾರದಲ್ಲಿ ಬಡವರು,ದುರ್ಬಲವರ್ಗಗಳು,ರೈತರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಏನನ್ನೂ ಮಾಡಿಲ್ಲ. ಅವರು ಮಾಡಿದ್ದೆಲ್ಲ ಶ್ರೀಮಂತ ವರ್ಗಕ್ಕಾಗಿ. ಕೇಂದ್ರವು ಶ್ರೀಮಂತ ಕೈಗಾರಿಕೋದ್ಯಮಿಗಳ 3.5 ಲ.ಕೋ.ರೂ.ಗಳ ಸಾಲವನ್ನು ಮನ್ನಾ ಮಾಡಿದೆಯೇ ಹೊರತು ರೈತರದ್ದಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News